"50 ಸಾವಿರ ಕೋಟಿ ರೂ.ಅಕ್ರಮ ಆಸ್ತಿ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ"
ಯಾದಗಿರಿ, ಎ. 20: ‘ಲೋಕಸಭೆ ಕಾಂಗ್ರೆಸ್ ನಾಯಕ ಹಾಗೂ ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ 50 ಸಾವಿರ ಕೋಟಿ ರೂ.ಅಕ್ರಮ ಆಸ್ತಿ ಹೊಂದಿರುವುದನ್ನು ಬಿಜೆಪಿ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಶನಿವಾರ ಜಿಲ್ಲೆ ಹತ್ತಿಕುಣಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾಲೀಕಯ್ಯ ಗುತ್ತೇದಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆಯವರು 50 ಸಾವಿರ ಕೋಟಿ ರೂ.ಅಕ್ರಮ ಆಸ್ತಿ ಆರೋಪ ಸುಳ್ಳಾದರೆ ಅವರು ರಾಜಕೀಯ ನಿವೃತ್ತಿ ಹೊಂದಬೇಕು ಎಂದು ಹೇಳಿದರು.
ಪ್ರಧಾನಿ ಮೋದಿಯವರ ಅಡಿಯಲ್ಲೇ ಆದಾಯ ತೆರಿಗೆ ಇಲಾಖೆ(ಐಟಿ), ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಸಿಬಿಐ ಇದೆ. ಯಾವುದಾದರೂ ಒಂದು ಸಂಸ್ಥೆಯಿಂದ ತನಿಖೆ ಮಾಡಿಸಲಿ. ಐದು ವರ್ಷ ಲೋಕಸಭೆಯಲ್ಲಿ ಹೋರಾಟ ಮಾಡಿದ ವೇಳೆ ಯಾವುದೇ ಆರೋಪವನ್ನು ಮಾಡಲಿಲ್ಲ. ಇದೀಗ ಚುನಾವಣಾ ವೇಳೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾತನಾಡಲು ಯಾವುದೇ ವಿಚಾರಗಳಿಲ್ಲ. ಹೀಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ಹುರುಳಿಲ್ಲದ ಆರೋಪಗಳಿಂದ ಜನರ ಮನಸ್ಥಿತಿಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಪರಿಷತ್ ಸದಸ್ಯ ರವಿಕುಮಾರ್‌ಗೆ ನನ್ನ ಬಗ್ಗೆ ಮಾತನಾಡುವ ಅರ್ಹತೆಯೇ ಇಲ್ಲ. ಅವರು ನಾಮ ನಿರ್ದೇಶನದಿಂದ ಆಯ್ಕೆಯಾಗಿದ್ದಾರೆ. ನಾನು ಜನರಿಂದ ಆಯ್ಕೆಯಾಗಿದ್ದೇನೆಂದು ತಿರುಗೇಟು ನೀಡಿದ ಅವರು, ಖರ್ಗೆ ಪುತ್ರ ವ್ಯಾಮೋಹದ ಬಗ್ಗೆ ಮಾತನಾಡುವ ಮಾಲೀಕಯ್ಯ ಗುತ್ತೇದಾರ್ ತಮ್ಮ ಕುಟುಂಬ ಸದಸ್ಯರ ಪದವಿಗಳ ಬಗ್ಗೆಯೂ ಬಾಯಿ ಬಿಡಬೇಕು ಎಂದು ಲೇವಡಿ ಮಾಡಿದರು.
ನಾನು ತೆರಿಗೆ ವಂಚನೆ ಮಾಡಿದ್ರೆ, ಅಕ್ರಮ ಆಸ್ತಿ ಸಂಪಾದನೆ ಮಾಡಿದ್ರೆ ತನಿಖೆ ಆಗಲಿ. ಅವರದ್ದೇ ಸರಕಾರ ಕೇಂದ್ರದಲ್ಲಿ ಇದೆ. ತನಿಖೆ ವೇಳೆ ನಾನು ತಪ್ಪುಮಾಡಿರೋದು ಸಾಬೀತಾದ್ರೆ ಗಲ್ಲಿಗೆ ಹಾಕಲಿ.
-ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ