ವಿದ್ಯಾರ್ಥಿನಿ ಮಧು ನಿಗೂಢ ಸಾವು ಪ್ರಕರಣ: ಶೀಘ್ರ ಸತ್ಯಾಂಶ ಹೊರಕ್ಕೆ- ಎಸ್ಪಿ ಡಿ.ಕಿಶೋರ ಬಾಬು
ರಾಯಚೂರು, ಎ.20: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಮಧು ಪತ್ತಾರ ನಿಗೂಢ ಸಾವು ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಸತ್ಯಾಂಶ ಹೊರ ಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಪ್ರಕರಣ ಸಂಬಂಧ ಮಾಹಿತಿ ನೀಡಿದ ಅವರು, ಮೃತ ದೇಹ ವ್ಯಾಪ್ತಿಯಲ್ಲಿ ದೊರೆತಿರುವ ಸಾಕ್ಷಿಗಳನ್ನು ಆಧರಿಸಿ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಮೊಕದ್ದಮೆ ದಾಖಲಿಸಿಕೊಂಡು ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಯೂ ಕೈಗೊಳ್ಳಲಾಗಿದೆ ಎಂದರು.
ಡೆತ್‌ನೋಟ್, ಮರಣೋತ್ತರ ಪರೀಕ್ಷಾ ವರದಿಗಳು, ಎಫ್‌ಎಸ್‌ಎಲ್ ನಿಂದ ಬರಬೇಕಿದೆ ಎಂದ ಅವರು, ಪ್ರಕರಣ ಗಂಭೀರಾಗಿದ್ದು, ತನಿಖೆ ಹಂತದಲ್ಲಿದೆ. ಹೀಗಾಗಿ, ಹೆಚ್ಚಿನ ವಿವರ ಬಹಿರಂಗಗೊಳಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಊಹಾಪೋಹದ ವಿಚಾರಗಳು ಹರಿದಾಡುತ್ತಿವೆ. ಈ ತಪ್ಪನ್ನು ಜವಾಬ್ದಾರಿಯುತ ಮಾಧ್ಯಮಗಳು ಮಾಡಬಾರದು. ಹೆಸರುಗಳನ್ನು ಗೌಪ್ಯವಾಗಿಡಬೇಕು ಎಂದು ಮನವಿ ಮಾಡಿದರು.