ಲೋಕಸಭಾ ಚುನಾವಣೆ: ಎರಡನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

Update: 2019-04-20 16:14 GMT

ಬೆಂಗಳೂರು, ಎ.20: ಮೊದಲನೇ ಹಂತದ ಬಳಿಕ ಇದೀಗ ಎರಡನೇ ಹಂತದ ಚುನಾವಣೆ ರಂಗೇರಿದೆ. ಮೇ 23 ರಂದು ಚುನಾವಣೆ ನಡೆಯಲಿರುವ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ತಾರಕಕ್ಕೇರಿದ್ದು, ನಾಳೆ ಸಂಜೆ 6 ಗಂಟೆಯಿಂದ ಈ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ.

ಬಿಸಿಲು ನಾಡಿನ ವ್ಯಾಪ್ತಿಗೆ ಒಳಪಡುವ ಉತ್ತರ ಕರ್ನಾಟಕ ಲೋಕಸಭಾ ಕ್ಷೇತ್ರಗಳಾದ ಚಿಕ್ಕೋಡಿ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಧಾರವಾಡ, ಕಲಬುರಗಿ, ರಾಯಚೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.23ರಂದು ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 237 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರರು ಅವರ ಭವಿಷ್ಯ ಬರೆಯುವ ಸಮಯ ಹತ್ತಿರವಾಗುತ್ತಿದೆ.

ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಈ ಕ್ಷೇತ್ರಗಳ ಪ್ರದಕ್ಷಿಣೆ ಹಾಕುವ ಮೂಲಕ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಮತದಾರರ ಮನವೊಲಿಸಿಕೊಳ್ಳಲು ಸರ್ವ ರೀತಿಯ ಕಸರತ್ತಿನಲ್ಲಿ ತೊಡಗಿದ್ದಾರೆ. ಭದ್ರಾವತಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಘವೇಂದ್ರ ಪರವಾಗಿ ರೋಡ್ ಶೋ ನಡೆಸಿದ್ದಾರೆ. ಸುಷ್ಮಾ ಸ್ವರಾಜ್, ಪ್ರಹ್ಲಾದ್ ಜೋಶಿ ಮತಯಾಚಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಈ ಭಾಗದಲ್ಲಿನ ಕೆಲವು ಕ್ಷೇತ್ರಗಳಿಗೆ ಭೇಟಿ ಕೊಟ್ಟು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ರಾಷ್ಟ್ರ ನಾಯಕರ ಜತೆಗೆ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ರಾಯಚೂರು ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಕಣದಲ್ಲಿ ಯಾರು ಯಾರಿದ್ದಾರೆ: ಎರಡನೇ ಹಂತದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಪುತ್ರರಾದ ಮಧು ಬಂಗಾರಪ್ಪಮತ್ತು ಬಿ.ವೈ ರಾಘವೇಂದ್ರ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹಾಲಿ ಸಂಸದರಾದ ಪ್ರಹ್ಲಾದ್ ಜೋಶಿ, ಕರಡಿ ಸಂಗಣ್ಣ, ಜಿ.ಎಂ.ಸಿದ್ದೇಶ್ವರ್, ಪ್ರಕಾಶ್ ಹುಕ್ಕೇರಿ, ಶಿವಕುಮಾರ್ ಉದಾಸಿ, ಗದ್ದಿಗೌಡರ್, ಬಿ.ವಿ.ನಾಯಕ್, ಉಗ್ರಪ್ಪ ಸೇರಿದಂತೆ ಹಲವರು ಕಣದಲ್ಲಿದ್ದು, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮತದಾರರ ಮನೆ ಬಾಗಿಲುಗಳಿಗೆ ಎಡತಾಕುತ್ತಿದ್ದಾರೆ.

ಎರಡನೇ ಹಂತದ 14 ಕ್ಷೇತ್ರಗಳಲ್ಲಿ 2 ಕೋಟಿ 43 ಲಕ್ಷಕ್ಕೂ ಅಧಿಕ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. 14 ಕ್ಷೇತ್ರಗಳಲ್ಲಿ ಒಟ್ಟು 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಅತಿ ಹೆಚ್ಚು ಅಭ್ಯರ್ಥಿಗಳು ಬೆಳಗಾವಿಯಲ್ಲಿದ್ದರೆ, ಅತ್ಯಂತ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ರಾಯಚೂರಿನಲ್ಲಿ ಕಣದಲ್ಲಿದ್ದಾರೆ. ಈ ಕ್ಷೇತ್ರದಿಂದ 6 ಮಂದಿ ಸ್ಪರ್ಧಿಸಿದ್ದಾರೆ. ಸುಸೂತ್ರ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News