ಕನಿಷ್ಠ 1 ಲಕ್ಷ ಮತದಿಂದ ಪ್ರಕಾಶ್ ಹುಕ್ಕೇರಿ ಗೆಲುವು: ಸಚಿವ ಸತೀಶ್ ಜಾರಕಿಹೊಳಿ

Update: 2019-04-20 16:18 GMT

ಬೆಳಗಾವಿ, ಎ. 20: ಮೋದಿ ಗಾಳಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರನ್ನು ಗೆಲ್ಲಿಸಿದ್ದೆವು. ಆದರೆ, ಇದೀಗ ಮೋದಿ ಗಾಳಿ ಇಲ್ಲ. ಹೀಗಾಗಿ ಕನಿಷ್ಠ 1 ಲಕ್ಷ ಮತಗಳ ಅಂತರದಿಂದ ಪ್ರಕಾಶ್ ಹುಕ್ಕೇರಿ ಗೆಲುವು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಸುಳ್ಳು ಹೇಳಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ. ಇಂದು ದೇಶದಲ್ಲಿ ಅನಾವಶ್ಯವಾಗಿ ಗೊಂದಲ ಸೃಷ್ಟಿಸಿ, ಜನರ ದಿಕ್ಕು ತಪ್ಪಿಸಿ, ಮತ್ತೆ ಅಧಿಕಾರದ ಗದ್ದುಗೆ ಏರುವ ಹಂಬಲದಲ್ಲಿದ್ದಾರೆ ಎಂದು ಟೀಕಿಸಿದರು.

ಎಪ್ಪತ್ತು ವರ್ಷದಲ್ಲಿ ದೇಶದಲ್ಲಿ ಕಾಂಗ್ರೆಸ್ ಸರಕಾರ ಏನೂ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಹಿಡಕಲ್, ನಾರಾಯಣಪುರ ಜಲಾಶಯ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಐದೇ ವರ್ಷದಲ್ಲೆ ಮಾಡಿತ್ತೆ ಎಂದು ಜಾರಕಿಹೊಳಿ ಪ್ರಶ್ನಿಸಿದರು.

ಚಿಕ್ಕೋಡಿ ಕ್ಷೇತ್ರದ ಸಂಸದ ಪ್ರಕಾಶ ಹುಕ್ಕೇರಿ ಅವರು ದೇಶದಲ್ಲಿ ಅತಿಹೆಚ್ಚು ಹಣ ತಂದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ ಮೊದಲ ಸಂಸದ. ಜನರ ಸೇವೆಗಾಗಿ 750 ಕೋಟಿ ರೂ.ಅನುದಾನ ತಂದಿದ್ದಾರೆ. ಅವರನ್ನು ಕನಿಷ್ಠ 1ಲಕ್ಷ ಅಂತರದಿಂದ ಜಯಶಾಲಿಯನ್ನಾಗಿ ಮಾಡುವುದು ಕಾರ್ಯಕರ್ತರ ಕೆಲಸ ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News