ಎ.23ರ ಮತದಾನಕ್ಕೆ ಜಿಲ್ಲಾಡಳಿತ ಸರ್ವ ಸನ್ನದ್ಧ: ಕೊಪ್ಪಳ ಡಿಸಿ ಪಿ.ಸುನೀಲ್ ಕುಮಾರ್

Update: 2019-04-20 16:23 GMT

ಕೊಪ್ಪಳ, ಎ.20: ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಎ.23ರಂದು ನಡೆಯಲಿದ್ದು, ಜಿಲ್ಲಾಡಳಿತವು ಸರ್ವ ಸನ್ನದ್ಧವಾಗಿದೆ. 2033 ಮತಗಟ್ಟೆಗಳಿಗೆ 9817 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎ.23ರಂದು ಮತದಾನ ನಡೆಯಲಿದೆ. ಮೇ.23ಕ್ಕೆ ಮತ ಎಣಿಕೆ ನಡೆಯಲಿದ್ದು, ಮೇ 27ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅಂತಿಮವಾಗಿ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 8 ಕ್ಷೇತ್ರದಲ್ಲಿ 2033 ಮತಗಟ್ಟೆ ಸ್ಥಾಪಿಸಲಾಗಿದ್ದು 8,62,466 ಪುರುಷ, 8,73,539 ಮಹಿಳೆ, 113 ಇತರೆ ಸೇರಿದಂತೆ ಒಟ್ಟಾರೆ 17,36,118 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

43 ಸಾವಿರ ಯುವ ಮತದಾರರು: ಈ ಬಾರಿ 43,216 ಯುವ ಮತದಾರರು ಮತಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದರಲ್ಲಿ 24,557 ಪುರುಷರಿದ್ದರೆ, 18,655 ಮಹಿಳಾ ಮತದಾರದ್ದಾರೆ. ಇನ್ನೂ 8 ಕ್ಷೇತ್ರಗಳಲ್ಲಿ ವಿಕಲಚೇತನ, ಕಿವುಡ, ಮೂಗ ಮತದಾರರನ್ನು ಪತ್ತೆ ಮಾಡಲಾಗಿದ್ದು, ಅಂಧ ಮತದಾರರು 2,271, ಕಿವುಡ ಮತ್ತು ಮೂಗ ಮತದಾರರು 2,018, ವಿಕಲಚೇತನ 12,185 ಇತರೆ 2,323 ಸೇರಿದಂತೆ ಒಟ್ಟು 18,797 ಮತದಾರರಿದ್ದಾರೆ ಎಂದು ಹೇಳಿದರು.

ವಿಕಲಚೇತನ, ಸಖೀ ಮತಗಟ್ಟೆ: ಕೊಪ್ಪಳದ ಎಂಎಚ್‌ಪಿಎಸ್ ಶಾಲೆಯ ಮತಗಟ್ಟೆಯಲ್ಲಿ ಎಲ್ಲ ವಿಕಲಚೇತನ ಸಿಬ್ಬಂದಿಗಳನ್ನೇ ನಿಯೋಜನೆ ಮಾಡಲಾಗಿದೆ. ಇನ್ನೂ ಸಿಂಧನೂರಿನ ಗ್ಲೋರಿ ಶಾಲೆ, ಎಪಿಎಂಸಿ ಯಾರ್ಡ್‌ನ ಸರಕಾರಿ ಪ್ರಾಥಮಿಕ ಶಾಲೆ, ಮಸ್ಕಿಯ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಕುಷ್ಟಗಿಯ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಕನಕಗಿರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಗಂಗಾವತಿಯ ಎಚ್.ಆರ್.ಸರೋಜಮ್ಮ ಸ್ಮಾರಕ ಬಾಲಕಿಯರ ಸಂಯುಕ್ತ ಪಪೂ ಕಾಲೇಜು, ಯಲಬುರ್ಗಾದ ಪಪಂ ಕಾರ್ಯಾಲಯ, ಕೊಪ್ಪಳದ ಪಿಎಲ್ಡಿ ಬ್ಯಾಂಕ್, ಸಿರಗುಪ್ಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಹಿಳಾ ಅಥವಾ ಸಖೀ ಮತಗಟ್ಟೆ ಸ್ಥಾಪಿಸಿದೆ. ಇಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೇ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಮಾದರಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಜಿಲ್ಲೆಯಲ್ಲಿ ಪೊಲೀಸ್ ತಂಡ 50,595 ರೂ. ಮೌಲ್ಯದ 154 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದು, 42 ಎಫ್‌ಐಆರ್ ದಾಖಲಿಸಿದೆ. ಇನ್ನು ಅಬಕಾರಿ ತಂಡವು 49,06,929 ಮೌಲ್ಯದ 29,125 ಲೀ ಅಕ್ರಮ ಮದ್ಯ ವಶಕ್ಕೆ ಪಡೆದಿದೆ. 4 ವಾಹನ ವಶಕ್ಕೆ ಪಡೆದಿದ್ದು, 64 ಲಕ್ಷ ಮೌಲ್ಯದ್ದಾಗಿವೆ. ಫ್ಲೈಯಿಂಗ್ ಸ್ಕ್ವಾಡ್ ತಂಡವು 6821 ಮೌಲ್ಯದ 17 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆದು 1 ಎಫ್‌ಐಆರ್ ದಾಖಲಿಸಿದ್ದರೆ ಇತರೆ 9 ಬ್ಯಾನರ್, 20 ಬಿಜೆಪಿ ಬಾವುಟ, 27 ಆಯುಷ್ಮಾನ್ ಭಾರತ ಕಾರ್ಡ್ ಸೇರಿ 53400 ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದು 21 ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News