ಸರ್ವಾಧಿಕಾರಿ ಮೋದಿಗೆ ರೈತರ ಬಗ್ಗೆ ಕಾಳಜಿಯಿಲ್ಲ: ದೇವೇಗೌಡ ವಾಗ್ದಾಳಿ

Update: 2019-04-20 16:57 GMT

ಶಿವವೊಗ್ಗ, ಎ. 20: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯಾಗಿದ್ದು, ಅವರಿಗೆ ದೇಶದ ಅನ್ನದಾತ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಂಬ್ಳೆಬೈಲು ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೈತ್ರಿಕೂಟ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ರೈತರ ಬಗ್ಗೆ ಯಾವುದೇ ಕರುಣೆಯಿಲ್ಲದೆ ಆಡಳಿತ ನಡೆಸುತ್ತಿದ್ದಾರೆ. ಕಳೆದ ಐದು 
ರ್ಷಗಳ ಅವರ ಆಡಳಿತಾವಧಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಗೊತ್ತಾಗುತ್ತದೆ. ದೇಶದ ರೈತರು ಸಂಕಷ್ಟದಲ್ಲಿದ್ದರೂ ಅವರ ಶ್ರೇಯೋಭಿವೃದ್ಧಿಗೆ ಯಾವುದೇ ಕ್ರಮಕೈಗೊಳ್ಳದೆ, ಪೊಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆ ಹೇಳಿದ್ದೆ. ಆದರೆ, ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವ ಮೋದಿಯನ್ನು ಎದುರಿಸಲು ನೀವು ಬೇಕು ಎಂದು ಹಲವು ರಾಷ್ಟ್ರೀಯ ಮುಖಂಡರು ಮನವಿ ಮಾಡಿದರು. ಈ ಕಾರಣದಿಂದ ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದ ಅವರು, ಮೋದಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣದಿಂದ ಎಲ್ಲ ಜಾತ್ಯತೀತ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸುತ್ತಿವೆ ಎಂದು ನುಡಿದರು.

ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಮತದಾರರು ಬೆಂಬಲಿಸಬೇಕು. ಈ ಮೂಲಕ ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಅವರು ಆಯ್ಕೆಯಾಗುವಂತೆ ಕ್ಷೇತ್ರದ ಮತದಾರರು ಮಾಡಬೇಕು ಎಂದು ತಿಳಿಸಿದರು. ಪ್ರಸ್ತುತ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ರಾಜ್ಯದಲ್ಲಿ ಮೈತ್ರಿಕೂಟ ಮುನ್ನಡೆ ಸಾಧಿಸುವುದು ನಿಶ್ಚಿತವಾಗಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆಯನ್ನು ಆ ಪಕ್ಷದ ಮುಖಂಡರು ನಡೆಸುತ್ತಿಲ್ಲ. ಇದಕ್ಕೆ ಬದಲಾಗಿ ಮೋದಿಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪಅವರ ಸಾಧನೆ ಏನು? ಎಂದು ಡಿಕೆಶಿ ತರಾಟೆಗೆ ತೆಗೆದುಕೊಂಡರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ದೇಶದಲ್ಲಿ ಅಚ್ಛೇದಿನ್ ಬರಲಿದೆ ಎಂದು ಮೋದಿ ಹೇಳಿದ್ದರು. ಆದರೆ, ಕಳೆದ 5 ವರ್ಷದ ಆಡಳಿತಾವದಿಯಲ್ಲಿ ಒಳ್ಳೆಯ ದಿನಗಳೇ ಬರಲಿಲ್ಲ. ಇದರಿಂದ ದೇಶದ ಮತದಾರರು ಭ್ರಮನಿರಸನಗೊಂಡಿದ್ದಾರೆ. ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಿವಕುಮಾರ್ ನುಡಿದರು.

ಸಮಾರಂಭದಲ್ಲಿ ಅಭ್ಯರ್ಥಿ ಮಧು ಬಂಗಾರಪ್ಪ, ಸಚಿವರಾದ ಎಚ್.ಡಿ. ರೇವಣ್ಣ, ಡಿ.ಸಿ. ತಮ್ಮಣ್ಣ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News