ಕರ್ತವ್ಯಲೋಪದ ಆರೋಪ: ಇಬ್ಬರು ಅಧಿಕಾರಿಗಳು ಅಮಾನತು

Update: 2019-04-20 17:10 GMT

ದಾವಣಗೆರೆ, ಎ.20: ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಅಂಚೆ ಮತಪತ್ರ ಹಾಗೂ ಇಡಿಸಿಗೆ ಸಂಬಂಧಿಸಿದಂತೆ ನೇಮಿಸಲಾದ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯಂತೆ ಇಬ್ಬರು ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಸೇವೆಯಿಂದ ಅಮಾನತಿನಲ್ಲಿಟ್ಟಿದ್ದಾರೆ.

106-ದಾವಣಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂಚೆ ಮತಪತ್ರ ಹಾಗೂ ಇಡಿಸಿಗೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ಮಹಾ ನಗರಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಆರ್. ಗಿರಡ್ಡಿ ಹಾಗೂ ಮಹಾ ನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ವಿ. ಜಗನ್ನಾಥ್ ರಾವ್ ಇವರನ್ನು ಕರ್ತವ್ಯ ಲೋಪವೆಸಗಿದ್ದಕ್ಕಾಗಿ ಕೆಸಿಎಸ್‌ಆರ್ ನಿಯಮಗಳು 1957ರ ನಿಯಮ 10(1)(ಡಿ) ರಂತೆ ಸೇವೆಯಿಂದ ಅಮಾನತ್ತಿನಲ್ಲಿ ಇಡಲಾಗಿದೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ 2019ರ ಕಾರ್ಯ ಪರಿಶೀಲನೆಗೆ ಸಂಬಂಧಿಸಿದಂತೆ ಏ.19ರಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ಅಂಚೆ ಮತಪತ್ರ ಮತ್ತು ಇಡಿಸಿ ಜಿಲ್ಲಾ ನೋಡಲ್ ಅಧಿಕಾರಿಯೊಂದಿಗೆ ಪಾಲಿಕೆಗೆ ಭೇಟಿ ನೀಡಿದಾಗ, ಅಂಚೆ ಮತಪತ್ರ ಹಾಗೂ ಚುನಾವಣಾ ಕಾರ್ಯನಿರತ ಅಧಿಕಾರಿ ಮತ್ತು ಸಿಬ್ಬಂದಿ ಅಂಚೆ ಮತಪತ್ರ ಹಾಕಲು ಕಚೇರಿ ಸಿಬ್ಬಂದಿ ಇಲ್ಲದಿರುವುದು ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಸುಮಾರು 923 ಇಡಿಸಿ ಅರ್ಜಿಗಳನ್ನು ಬಾಕಿ ಇರಿಸಿಕೊಂಡಿರುವುದು ಕಂಡು ಬಂದಿದೆ.

ಪೊಲೀಸ್ ಹಾಗೂ ವಾಹನ ಚಾಲಕರ ಸುಮಾರು 397 ಇಡಿಸಿ ಅರ್ಜಿಗಳು ಪತ್ತೆ ಇರುವುದಿಲ್ಲ. ಈ ಕುರಿತು 106-ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂಚೆ ಮತಪತ್ರ ಹಾಗೂ ಇಡಿಸಿಗೆ ಸಂಬಂಧಿಸಿದಂತೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳನ್ನು ವಿಚಾರಿಸಿದಾಗ ಬೇಜವಾಬ್ದಾರಿ ಉತ್ತರ ನೀಡಿರುತ್ತಾರೆ. ಆದ್ದರಿಂದ ಈ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಗೊಳಿಸಿ, ಈ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರ ಪೂರ್ವಾನುಮತಿಯಿಲ್ಲದೆ, ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಮತ್ತು ಈ ಅಧಿಕಾರಿಗಳಿಗೆ ಮಾನತ್ತಿನ ಅವಧಿಯಲ್ಲಿ ಕೆಸಿಎಸ್ಆರ್ ನಿಯಮ 98 ರಡಿ ಜೀವನಾಧಾರ ಭತ್ತೆ ಸಂದಾಯ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News