ಬಿಜೆಪಿಯಿಂದ ಮತದಾರರಿಗೆ ದ್ರೋಹ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

Update: 2019-04-20 17:18 GMT

ದಾವಣಗೆರೆ, ಎ.20: ಜನರನ್ನು ದಾರಿ ತಪ್ಪಿಸುವುದು, ಮೋಸ ಮಾಡುವುದು ಅತ್ಯಂತ ದೊಡ್ಡ ದ್ರೋಹವಾಗಿದ್ದು, ಅಂತಹ ಅಪರಾಧ ಎಸಗಿದ ಬಿಜೆಪಿಗೆ ಈ ಬಾರಿ ಒಂದೇ ಒಂದು ಮತವನ್ನೂ ಹಾಕದಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ಶನಿವಾರ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರ ಪ್ರಚಾರ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಸುಳ್ಳೇ ಬಂಡವಾಳವಾಗಿದ್ದು, 5 ವರ್ಷದ ಹಿಂದೆ ಕೇವಲ ಭ್ರಮಾಲೋಕ ಸೃಷ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ದೇಶದ ಜನತೆಗೆ ನೀಡಿದ್ದ ಯಾವೊಂದು ಭರವಸೆಯನ್ನು ಈಡೇರಿಸಿಲ್ಲ. ಸ್ವತಂತ್ರ ಭಾರತದಲ್ಲಿ ಪ್ರಧಾನಿ ಮೋದಿಯಷ್ಟು ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ನಾನು ನೋಡಿಯೇ ಇಲ್ಲ ಎಂದು ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದುಳಿದವರಿಗೆ ಬಿಜೆಪಿಯಲ್ಲಿಲ್ಲ ಟಿಕೆಟ್
‘ಸಬ್ ಕ ಸಾಥ್ ಸಬ್ ಕ ವಿಕಾಸ್’ ಎನ್ನುವ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಒಂದೇ ಒಂದು ಕ್ಷೇತ್ರಕ್ಕೂ ಹಿಂದುಳಿದ ವರ್ಗಕ್ಕೆ ಟಿಕೆಟ್ ನೀಡಿಲ್ಲ. ಆದರೆ, ಕಾಂಗ್ರೆಸ್ ಸರ್ವಸಮಾನತೆ ಬಯಸುವ ಪಕ್ಷವಾದ್ದರಿಂದ ರಾಜ್ಯದಲ್ಲಿ ಒಟ್ಟು 8 ಕ್ಷೇತ್ರಗಳಲ್ಲಿ ಎಲ್ಲಾ ವರ್ಗಕ್ಕೆ ಟಿಕೆಟ್ ಕಲ್ಪಿಸಿದೆ. ನಿಜವಾದ ಸಮಾನತೆ ಇರುವುದು ಕಾಂಗ್ರೆಸ್‌ನಲ್ಲಿ ಎಂದರು.

ಬಿಎಸ್ ಯಡಿಯೂರಪ್ಪ ಹಸಿರು ಶಾಲು ಹೊದ್ದು ರೈತರಂತೆ ಫೋಸು ಕೊಡುತ್ತಾರೆ. ಆದರೆ, ರೈತರಿಗಾಗಿ ಅವರು ಮಾಡಿದ್ದೇನು? 2009ರ ಡಿ. 30ರಂದು ಸಿಎಂ ಆಗಿದ್ದ ಬಿಎಸ್‌ವೈಗೆ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರೆ, ನಾನೇನು ನೋಟ್ ಪ್ರಿಂಟಿಂಗ್ ಮಶಿನ್ ಇಟ್ಟುಕೊಂಡಿದ್ದೇನಾ? ಸಾಲ ಮನ್ನಾ ಸಾಧ್ಯವೇ ಇಲ್ಲ ಎಂದಿದ್ದನ್ನು ರಾಜ್ಯದ ಜನತೆ ಮರೆಯಬಾರದು ಎಂದು ಅವರು ಹೇಳಿದರು.

ನಮ್ಮ ಆಡಳಿತದಲ್ಲಿ ರೈತರಿಗೆ ಕೃಷಿ ಹೊಂಡ, ಸಾಲ ಮನ್ನಾ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ 5 ಲಕ್ಷ ಪರಿಹಾರ, ಕುಟುಂಬಸ್ಥರಿಗೆ 2 ಸಾವಿರ ಮಾಶಾಸನ, ರೈತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದೇವೆ. ಆದರೆ, ಬಿಜೆಪಿ ಸರಕಾರ ಈವರೆಗೆ ರೈತರಿಗೆ ಮಾಡಿರುವ ಒಂದಾದರೂ ಯೋಜನೆ ಹೇಳಿ ನೋಡೋಣಾ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆದರೆ, ನಮ್ಮನ್ನೆ ಕೈಬಿಟ್ಟಿರಲ್ಲ ಯಾಕೆ? ಕೆಲಸ ಮಾಡುವವರನೇ ಕೈಬಿಟ್ಟರೆ ಹೇಗೆ? ಎಂದು ಜನತೆಯನ್ನು ಪ್ರಶ್ನಿಸಿದ ಅವರು, ಇದೇ ಕಾರಣಕ್ಕೆ ಎಸ್‌ಎಸ್ ಮಲ್ಲಿಕಾರ್ಜುನ್ ಬೇಸತ್ತು ಈ ಬಾರಿ ಟಿಕೆಟ್ ಬೇಡ ಎಂದರು. ಅನೇಕ ಬಾರಿ ನಾನೇ ಫೋನ್ ಮಾಡಿದರೂ ರಿಸೀವ್ ಮಾಡಲಿಲ್ಲ. ಆದ್ದರಿಂದ ಕೊನೆಗೆ ಮಂಜಪ್ಪರನ್ನು ನಿಲ್ಲಿಸಬೇಕಾಯಿತು. ಹಾಗಾಗಿ, ಎಲ್ಲ ವರ್ಗದ ಬಡವರು ಹಣಬಲಕ್ಕೆ ಬಲಿಯಾಗದೇ ಜನಬಲವಿರುವ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.

ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಚಿವ ಎಚ್.ಆಂಜನೇಯ, ಜೆಡಿಎಸ್ ಮುಖಂಡ ಹೊದಿಗೆರೆ ರಮೇಶ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಮಾತನಾಡಿದರು. ಸಭೆಯಲ್ಲಿ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಕೆ. ಶಿವಮೂರ್ತಿ, ಶಾಂತನಗೌಡ, ಮುಖಂಡರಾದ ಅಬ್ದುಲ್ ಜಬ್ಬಾರ್, ಬಲ್ಕೀಶ್ ಬಾನು, ಜಲಜಾನಾಯ್ಕ, ಯೋಗೀಶ್, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಜೆಡಿಎಸ್‌ನ ಶೀಲಾನಾಯ್ಕ, ಪಪಂ ಸದಸ್ಯ ತೇಜಸ್ವಿ ಪಟೇಲ್ ಮತ್ತಿತರರಿದ್ದರು.

ಮೋದಿ ಸಾಧನೆಗಳ ಕುರಿತು ಚರ್ಚೆಗೆ ಬರಲಿ

ನನ್ನ ಸಿಎಂ ಅವಧಿಯಲ್ಲಿ ನೀಡಿದ್ದ 165 ಭರವಸೆಗಳನ್ನು ಈಡೇರಿಸಿದ್ದೇನೆ. ನಾನು ಮಾಡಿದ ಸಾಧನೆಗಳ ಪಟ್ಟಿಯನ್ನು ಜನರ ಮುಂದಿಡುತ್ತೇನೆ. ಅದೇರೀತಿ, ಪ್ರಧಾನಿ ಮೋದಿ ತಾವು ಮಾಡಿದ ಸಾಧನೆಗಳೊಂದಿಗೆ ಚರ್ಚೆಗೆ ಬರಲಿ. ‘ಸಬ್‌ಕಾ ಸಾಥ್ ಸಬ್ ಕಾ ವಿಕಾಸ್’ ಆಗಿದ್ದು ವಿಜಯ್‌ಮಲ್ಯ, ನೀರವ್ ಮೋದಿ, ಲಲಿತ್ ಮೋದಿ, ಅಂಬಾನಿ, ಅದಾನಿಗಳಂತಹ ಶ್ರೀಮಂತರಿಗೆ ಹೊರತು, ಬಡವರಿಗೆ, ರೈತರಿಗೆ, ಕೂಲಿಕಾರ್ಮಿಕರಿಗಲ್ಲ. 2014ರಲ್ಲಿ ಮೋದಿ ‘ಅಚ್ಛೇದಿನ್’ ಆಯೇಂಗೆ ಎಂದರು. 350 ರೂ. ಇದ್ದ ಗ್ಯಾಸ್ ಸಿಲಿಂಡರ್ 900 ರೂ.ಗೆ ತಲುಪಿದ್ದು, ರಸಗೊಬ್ಬರದ ದರ 3 ಪಟ್ಟು ಹೆಚ್ಚಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಗಗನ ಮುಟ್ಟಿದ್ದು ಇವೆಲ್ಲಾ ಮೋದಿಜಿಯ ಅಚ್ಛೇದಿನ್‌ಗಳ ಭಾಗವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅವಧಿಯಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. 1948ರಲ್ಲಿ ಪಾಕಿಸ್ತಾನದ ಮೇಲೆ ಯುದ್ದ, 1961ರ ನೆಹರೂ ಆಡಳಿತದಲ್ಲಿ, 1971ರ ಇಂದಿರಾಗಾಂಧಿ ಆಡಳಿತದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಲೇ ಬಂದಿದೆ. ಆದರೆ, ಎಂದಿಗೂ ಈ ವಿಷಯವನ್ನು ಚುನಾವಣೆಗೆ ಎಳೆದು ತಂದಿರಲಿಲ್ಲ. ಆದರೆ, ಪ್ರಧಾನಿ ಮೋದಿ ಜೀವದ ಹಂಗು ತೊರೆದು ಸೈನಿಕರು ನಡೆಸಿದ ಯುದ್ಧವನ್ನು ತಾನೇ ಯುದ್ಧರಂಗಕ್ಕೆ ತೆರಳಿ ಗುಂಡು ಹಾರಿಸಿ, ಭಾರತವನ್ನು, ಭಾರತೀಯರನ್ನು ರಕ್ಷಿಸಿದ್ದೆ ಎಂದು ಪ್ರತಿಬಿಂಬಿಸುತ್ತಾ, ಈ ವಿಷಯವನ್ನು ಚುನಾವಣೆಗೆ ಬಳಸಿ ಕೊಳ್ಳುತ್ತಿರುವುದು ನಾಚಿಕೆ ಗೇಡಿನ ಸಂಗತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News