ಶಿವಮೊಗ್ಗದಲ್ಲಿ ಅಬ್ಬರದ ಪ್ರಚಾರ: ಘಟಾನುಘಟಿ ನಾಯಕರಿಂದ ಬಿರುಸಿನ ಮತಯಾಚನೆ

Update: 2019-04-20 17:23 GMT

ಶಿವಮೊಗ್ಗ, ಏ. 20: ಮಾಜಿ ಸಿಎಂಗಳ ಇಬ್ಬರು ಪುತ್ರರ ನೇರ ಹಣಾಹಣಿಯಿಂದ 'ಹೈವೋಲ್ಟೇಜ್' ಕಣವಾಗಿ ಬಿಂಬಿತವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬೀಳಲು ಒಂದು ದಿನ ಬಾಕಿಯಿರುವಂತೆ, ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಅಕ್ಷರಶಃ ಮುಗಿಲು ಮುಟ್ಟಿದೆ. ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಪ್ರಚಾರ ಕಣ ಅಕ್ಷರಶಃ ಕಾವೇರಿದೆ.

ಶನಿವಾರ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಘಟಾನುಘಟಿ ರಾಷ್ಟ್ರ ಹಾಗೂ ರಾಜ್ಯ ನಾಯಕರು, ತಮ್ಮ ಅಭ್ಯರ್ಥಿಗಳ ಪರವಾಗಿ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ನಡೆಸಿದರು. ರೋಡ್ ಶೋ, ಸಭೆ, ಸಮಾರಂಭಗಳ ಭರಾಟೆ ಜೋರಾಗಿತ್ತು. ಸುಡು ಬಿಸಿಲಿನ ನಡುವೆಯೂ ನಾಯಕರು ಮತದಾರರ ಮನವೊಲಿಕೆಗೆ ಭಾರೀ ಕಸರತ್ತು ನಡೆಸಿದರು.

ಪ್ರಚಾರದ ವಿವರ: ಪಕ್ಷದ ಅಭ್ಯರ್ಥಿ ಪರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಭದ್ರಾವತಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮುಖಂಡರಾದ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರು ಶನಿವಾರ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಂಬ್ಳೆಬೈಲು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮೈತ್ರಿಕೂಟ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಭ್ಯರ್ಥಿ ಮಧು ಬಂಗಾರಪ್ಪ, ಸಚಿವರಾದ ಡಿ.ಕೆ.ಶಿವಕುಮಾರ್, ಹೆಚ್.ಡಿ.ರೇವಣ್ಣ, ಡಿ.ಸಿ.ತಮ್ಮಣ್ಣ, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಮೈತ್ರಿಕೂಟದ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು. 

ಸಾಗರ ಪಟ್ಟಣದ ನೆಹರೂ ಮೈದಾನದಲ್ಲಿ ಸಂಜೆ ಆಯೋಜಿತವಾಗಿದ್ದ ಮೈತ್ರಿಕೂಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು. ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಮೈತ್ರಿಕೂಟದ ಹಲವು ಪ್ರಮುಖರು ಭಾಗವಹಿಸಿದ್ದರು.

ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆಯೋಜಿತವಾಗಿದ್ದ ಬಿಜೆಪಿ ಸಭೆಯಲ್ಲಿ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಪುಟ್ಟಸ್ವಾಮಿ, ಶಾಸಕರಾದ ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ನಂತರ ಎಸ್.ಎಂ.ಕೃಷ್ಣ ಹಾಗೂ ಬಿ.ಎಸ್.ಯಡಿಯೂರಪ್ಪರವರು ಶಿವಮೊಗ್ಗ ನಗರದ ಬೆಕ್ಕಿನಕಲ್ಮಠ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

ಉಳಿದಂತೆ ಶಿವಮೊಗ್ಗ ನಗರ, ಸೊರಬ, ಸಾಗರ, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಬಿಜೆಪಿ ಹಾಗೂ ಮೈತ್ರಿಕೂಟದ ಪ್ರಮುಖರು ಬಿರುಸಿನ ಮತಯಾಚನೆ ನಡೆಸಿದರು. ಸಭೆ, ಸಮಾರಂಭ, ಪಾದಯಾತ್ರೆಗಳು ಜೋರಾಗಿದ್ದವು. ಮತದಾರರ ಮನೆ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು.

ಒಂದಾದ ವಿರೋಧಿಗಳು: ಕಳೆದೆರೆಡು ದಿನಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಸಚಿವ ಡಿ.ಕೆ.ಶಿವಕುಮಾರ್ ರವರು ಭದ್ರಾವತಿ ರಾಜಕಾರಣದ ಅಜನ್ಮ ಶತ್ರುಗಳಾಗಿ ಪರಿವರ್ತಿತರಾಗಿದ್ದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ ಹಾಗೂ ಮಾಜಿ ಶಾಸಕ ಅಪ್ಪಾಜಿಗೌಡರನ್ನು  ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ರಾತ್ರಿ ಇಬ್ಬರು ನಾಯಕರು ಡಿಕೆಶಿ ಸಮ್ಮುಖದಲ್ಲಿ ಪರಸ್ಪರ ಕೈಕುಲುಕುವ ಮೂಲಕ ಭದ್ರಾವತಿ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. 

ಒಟ್ಟಾರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿರುವ ಶಿವಮೊಗ್ಗ ಕ್ಷೇತ್ರ ಈ ಬಾರಿ ಯಾರಿಗೆ ಒಲಿಯಲಿದೆ ಎಂಬುವುದು ಮಾತ್ರ ನಿಗೂಢವಾಗಿದೆ.

ಬಹಿರಂಗ ಪ್ರಚಾರ ಅಂತ್ಯಕ್ಕೆ ಕೌಂಟ್‍ಡೌನ್

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಎ. 23 ರಂದು ಮತದಾನ ನಡೆಯುತ್ತಿದೆ. ಎ. 21 ರಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬೀಳಲಿದೆ. ಮಂಗಳವಾರ ಯಾವುದೇ ರೀತಿಯ ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ. ಆದರೆ ಮತದಾರರ ಮನೆ ಮನೆಗೆ ತೆರಳಿ ಮತಯಾಚಿಸಬಹುದಾಗಿದೆ. ಈ ಕಾರಣದಿಂದ ಕೊನೆಯ ದಿನವಾದ ರವಿವಾರ ಕ್ಷೇತ್ರದಾದ್ಯಂತ ಬಹಿರಂಗ ಸಭೆಗಳ ಪ್ರಚಾರದ ಅಬ್ಬರ ಮತ್ತಷ್ಟು ಕಾವೇರುವುದು ನಿಶ್ಚಿತವಾಗಿದೆ. ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು ನಡೆಸಲಾಗುತ್ತಿದೆ.

ಮತದಾರರಲ್ಲದ ನಾಯಕರು ಕ್ಷೇತ್ರ ತೊರೆಯಬೇಕು

ಶಿವಮೊಗ್ಗ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ. ಮತದಾನ ನಡೆಯುವುದಕ್ಕೆ 48 ಗಂಟೆ ಮುಂಚಿತವಾಗಿ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಹಾಗೆಯೇ ಕ್ಷೇತ್ರದ ಮತದಾರರಲ್ಲದ ಸ್ಟಾರ್ ಕ್ಯಾಂಪೈನರ್ ಗಳು ಕ್ಷೇತ್ರ ತೊರೆಯಬೇಕಾಗಿದೆ. ಈ ಕಾರಣದಿಂದ ಎರಡೂ ಪಕ್ಷದ ಸ್ಟಾರ್ ಕ್ಯಾಂಪೈನರ್ ಗಳು ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದ್ದಾರೆ

Writer - ವರದಿ : ಬಿ.ರೇಣುಕೇಶ್

contributor

Editor - ವರದಿ : ಬಿ.ರೇಣುಕೇಶ್

contributor

Similar News