ದೇಶದ ರಕ್ಷಣೆಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

Update: 2019-04-20 17:25 GMT

ಶಿವಮೊಗ್ಗ, ಏ. 20: ದೇಶದ ಭದ್ರತೆ ಹಾಗೂ ನಾಗರಿಕರ ರಕ್ಷಣೆಗೆ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗಬೇಕು. ಈ ಕಾರಣದಿಂದ ಬಿಜೆಪಿಗೆ ಮತದಾರರು ಬೆಂಬಲ ವ್ಯಕ್ತಪಡಿಸಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮನವಿ ಮಾಡಿದ್ದಾರೆ.

ಶನಿವಾರ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ರೋಡ್ ಶೋನಲ್ಲಿ ಭಾಗವಹಿಸಿದ್ದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವ ಮೂಲಕ ಪಾಕಿಸ್ತಾನ ಹಾಗೂ ಭಯೋತ್ಪಾದಕರಿಗೆ ಎಚ್ಚರಿಕೆ ನೀಡಬೇಕಾಗಿದೆ. ಮೋದಿಯವರಿಂದ ಮಾತ್ರ ದೇಶದ ಪರಿಣಾಮಕಾರಿ ರಕ್ಷಣೆ ಹಾಗೂ ಸುಸ್ಥಿರ, ಅಭಿವೃದ್ದಿ ಪರ ಆಡಳಿತ ಸಾಧ್ಯವಾಗಲಿದೆ ಎಂದು ತಿಳಿಸಿದರು.

ನಾನು ಸ್ಪರ್ಧಿಸಿರುವ ಲೋಕಸಭಾ ಕ್ಷೇತ್ರದಲ್ಲಿಯೂ ಎ.23 ರಂದು ಚುನಾವಣೆ ನಡೆಯುತ್ತಿದೆ. ಆದಾಗ್ಯೂ ಪಕ್ಷದ ಕರೆಯ ಮೇರೆಗೆ ಹಾಗೂ ಮೋದಿಯವರ ಕೈ ಬಲಪಡಿಸಲು ಪ್ರಚಾರಕ್ಕೆ ಆಗಮಿಸಿದ್ದೇನೆ. ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು. 

ಹೆಲಿಕ್ಯಾಪ್ಟರ್ ಮೂಲಕ ಅಮಿತ್ ಶಾ ಭದ್ರಾವತಿ ಪಟ್ಟಣಕ್ಕೆ ಆಗಮಿಸಿದರು. ನಂತರ ಅಲಂಕೃತ ತೆರೆದ ವಾಹನದಲ್ಲಿ ರಂಗಪ್ಪ ವೃತ್ತದಿಂದ ಹಾಲಪ್ಪ ವೃತ್ತದವರೆಗೆ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮುಖಂಡರಾದ ಡಿ.ಹೆಚ್.ಶಂಕರಮೂರ್ತಿ ಸೇರಿದಂತೆ ಮೊದಲಾದವರಿದ್ದರು.

ಕಾಂಗ್ರೆಸ್ ವಿರುದ್ದ ಟೀಕಾಪ್ರಹಾರ

ಇದು ರಾಷ್ಟ್ರೀಯ ವಿಚಾರಧಾರೆ ಮುಂದಿಟ್ಟುಕೊಂಡು ನಡೆಯುತ್ತಿರುವ ಚುನಾವಣೆಯಾಗಿದೆ. ಕಾಂಗ್ರೆಸ್ ಪಕ್ಷವು ದೇಶಕ್ಕೆ ಇಬ್ಬರು ಪ್ರಧಾನಿಗಳನ್ನು ಮಾಡಲು ಹೊರಟಿದೆ. ಇದು ದೇಶದ ಅಖಂಡತೆಗೆ ಧಕ್ಕೆ ತರುವ ಕೆಲಸವಾಗಿದೆ ಎಂದು ಕಾಂಗ್ರೆಸ್ ವಿರುದ್ದ ಟೀಕಾಪ್ರಹಾರ ನಡೆಸಿರುವ ಅಮಿತ್ ಶಾ, 'ದೇಶದ ಭದ್ರತೆ, ಸಮಗ್ರತೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News