ಸೇನೆಯ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ: ಯಡಿಯೂರಪ್ಪ ಆಕ್ರೋಶ

Update: 2019-04-20 17:30 GMT

ಶಿವಮೊಗ್ಗ, ಎ. 20: ಎರಡು ಹೊತ್ತು ಊಟಕ್ಕೆ ಗತಿಯಿಲ್ಲದವರು ಸೇನೆಗೆ ಸೇರ್ಪಡೆಯಾಗುತ್ತಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕ ಕ್ರೀಡಾಂರ್ಗಣದಲ್ಲಿ ಆಯೋಜಿತವಾಗಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿಎಂ ಆಗಿ ಅಧಿಕಾರ ಸ್ವೀಕರಿಸುವ ವೇಳೆ, ಸಂವಿಧಾನಕ್ಕೆ ಬದ್ದನಾಗಿರುತ್ತೇನೆ, ಗೌಪ್ಯತೆ ಕಾಪಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ಆದರೆ ಐಟಿ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡುತ್ತಾರೆ. ಸಂಬಂಧಪಟ್ಟವರಿಗೆ ಸಹಕಾರ ನೀಡುತ್ತಾರೆ. ಈ ಮೂಲಕ ಸಿಎಂ ಹುದ್ದೆಯ ಘನತೆಗೆ ಚ್ಯುತಿ ತರುವ ಕೆಲಸ ಮಾಡಿದ್ದಾರೆ ಎಂದರು.

ಕಾಶ್ಮೀರದ ಪುಲ್ವಾಮಾ ದಾಳಿಯ ಬಗ್ಗೆ ತನಗೆ ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು ಎಂದು ಹೇಳುತ್ತಾರೆ. ಈ ಬಗ್ಗೆ ಮಾಹಿತಿಯಿದ್ದರೂ ಅವರು ರಾಷ್ಟ್ರಪತಿಗಳಿಗಾಗಲಿ, ಪ್ರಧಾನ ಮಂತ್ರಿ ಅಥವಾ ರಕ್ಷಣಾ ಘಟಕಕ್ಕೆ ಏಕೆ ತಿಳಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಗೆಲುವು ನಿಶ್ಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಮೈತ್ರಿಕೂಟದ ಪರವಾಗಿ ಯಾರು ಪ್ರಚಾರ ಮಾಡಿದ್ದಾರೋ ಅವರು ಪಶ್ಚತಾಪ ಪಡುವ ದಿನಗಳು ದೂರವಿಲ್ಲ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಶಾಸಕರಾದ ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ಹರ್ಷವರ್ಧನ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News