ಗಟ್ಟಿಯವರ ‘ತೀರ’

Update: 2019-04-20 18:37 GMT

‘ತೀರ’ ಅನೌಪಚಾರಿಕ ಮಾದರಿಯ ಆತ್ಮಕಥೆ. ಉದಾಹರಣೆಗೆ ಹೇಳುವುದಾದರೆ ಹುಟ್ಟಿದ ದಿನಾಂಕ, ವರ್ಷ, ಓದು-ವಿದ್ಯಾಭ್ಯಾಸ, ವಿವಾಹ, ವೃತ್ತಿ ಹೀಗೊಂದು ಕಾಲಾನುಕ್ರಮಣಿಕೆಯ ಗತಿಯಲ್ಲಿ ಸಾಗುವ ಬರವಣಿಗೆ ಇದಲ್ಲ. ಆದರೆ ಇವೆಲ್ಲವೂ ಇದರಲ್ಲಿದೆ. ತಂದೆ-ತಾಯಿ,ಅಕ್ಕ-ತಮ್ಮ-ಬಾವ-ಬಡತನ-ಶ್ರೀಮಂತಿಕೆ, ವಿದ್ಯಾರ್ಥಿ ದಿನಗಳ ಬವಣೆಗಳು, ಮೇಲಧಿಕಾರಿಗಳು-ಕೆಳಗಿನವರ ಅನುಸಂಧಾನಗಳು, ಇವೆಲ್ಲವೂ ಇಲ್ಲಿ ಗಟ್ಟಿಯವರ ಆತ್ಮದರ್ಪಣದ ಮುಖೇನ ಬಿಡಿಬಿಡಿ ನೋಟಗಳಾಗಿ ಕಾಣಿಸಿಕೊಳ್ಳುತ್ತವೆ.


ಕಳೆದ ವಾರ ಬಹಳ ದಿನಗಳ ನಂತರ ಗಾಂಧಿ ಬಜಾರಿನ ‘ಅಂಕಿತ’ಕ್ಕೆ ಭೇಟಿಕೊಟ್ಟಾಗ ಥಟ್ಟನೆ ನನ್ನ ಕಣ್ಸೆಳೆದದ್ದು ಕೆ.ಟಿ.ಗಟ್ಟಿಯವರ ಆತ್ಮಕಥೆ ‘ತೀರ’. ‘‘ಇದನ್ನು ನನ್ನ ಲೆಕ್ಕಕ್ಕೆ ಬರೆದುಕೊಳ್ಳಿ’’ ಎಂದು ಪ್ರಕಾಶ್ ಅವರಿಗೆ ಹೇಳಿ ‘ತೀರ’ವನ್ನು ಮನೆಗೆ ತಂದೆ. ಒಂದೇ ಪಟ್ಟಿನಲ್ಲಿ ಓದಿಸಿಕೊಂಡಿತು. ಒಂದೆರಡು ತಿಂಗಳ ಹಿಂದೆ ಗಟ್ಟಿಯವರು ಮನಸ್ಸಿಗೆ ಬಂದಿದ್ದರು-ಅವರಿಗೆ ಪ್ರಾಯ ಎಂಬತ್ತಾದ ಸಂದರ್ಭದಲ್ಲೋ ಏನೋ ಅವರ ಸಾಹಿತ್ಯ ಕುರಿತು ವಿಚಾರಸಂಕಿರಣವೊಂದು ನಡೆಯಿತೆಂಬ ಸುದ್ದಿ ಓದಿದಾಗ. ಆದರೆ ಅದಕ್ಕೆ ಹೆಚ್ಚು ಪ್ರಚಾರ ಸಿಕ್ಕಂತೆ ಕಾಣಲಿಲ್ಲ. ಕೆ.ಟಿ.ಗಟ್ಟಿಯವರು ಜನಪ್ರಿಯ ಸಾಹಿತಿ. ಕಾದಂಬರಿಕಾರರಾಗಿ ಅವರ ಜನಪ್ರಿಯತೆಯ ಸೂಚ್ಯಂಕ ರೇಖೆ ಬಹಳ ಎತ್ತರದಲ್ಲೇ ಇದೆ. ‘‘ಲೇಖಕರಾಗಿ ನಿಮ್ಮ ಆಸೆ ಏನು?’’ ಎಂದು ಕೇಳಿದರೆ ‘‘ಅತಿ ಹೆಚ್ಚು ಮಂದಿ ಓದುವಂಥವರಾಗಬೇಕು’’ಎನ್ನುತ್ತಾರೆ ಗಟ್ಟಿಯವರು. ಅವರ ಆಸೆ ಈಡೇರಿದೆ. ಅವರಿಗೆ ಗರಿಷ್ಠಮಟ್ಟದ ಓದುಗರಿದ್ದಾರೆ. ಸಾಹಿತ್ಯ ವಿಮರ್ಶೆಯಲ್ಲಿ ಜನಪ್ರಿಯತೆಯ ಮಾನದಂಡವೇನು ಎಂಬುದು ಖಚಿತವಾಗಿ ತಿಳಿಯದಾದರೂ, ಓದುಗರ ಬಳಗ ಅಳತೆಗೋಲುಗಳಲ್ಲಿ ಒಂದು ಎಂಬುದು ಪತ್ರಕರ್ತನಾಗಿ ನನಗೆ ಖಾತ್ರಿಯಾಗಿದೆ. ‘ಸುಧಾ’ ಮೊದಲಾದ ನಿಯತಕಾಲಿಕಗಳಲ್ಲಿ ಧಾರಾವಾಹಿ ಕಾದಂಬರಿಗಳು ಅಗ್ರಸ್ಥಾನ ಪಡೆದು ವಿಜೃಂಭಿಸುತ್ತಿದ್ದ ಒಂದು ಕಾಲವಿತ್ತು. ಕೆ.ಟಿ.ಗಟ್ಟಿ, ಉಷಾ ನವರತ್ನ ರಾಮ್, ಟಿ.ಕೆ.ರಾಮ ರಾವ್, ಸುದರ್ಶನ ದೇಸಾಯಿ, ಯೆಂಡಮೂರಿ-ಹೀಗೆ. ಇವರ ಕಾದಂಬರಿಗಳಿಗಾಗಿ ನಿಯತಕಾಲಿಕಗಳು ಕಾಯುತ್ತಿದ್ದವು.

‘‘ಕಾದಂಬರಿಯೊಂದು ಬರೆದುಕೊಡಿ’’ ಎಂದು ಪತ್ರಕರ್ತರಾದ ನಾವು ಅವರಿಗೆ ದುಂಬಾಲು ಬೀಳುತ್ತಿದ್ದುದೂ ಉಂಟು. ಪತ್ರಕರ್ತರ ದೃಷ್ಟಿಯಲ್ಲಿ ಜನಪ್ರಿಯತೆಯ ಮಾನದಂಡ ಎರಡೇ. ಒಂದು, ನಮ್ಮ ವಾಚಕರಿಂದ ಬರುತ್ತಿದ್ದ ಪತ್ರಗಳು. ಎರಡನೆಯದು, ನಮ್ಮ ಪ್ರಸರಣ ವಿಭಾಗದ ವರದಿ. ಗಟ್ಟಿಯವರದೋ, ಉಷಾ ಅವರದೋ ಟಿ.ಕೆ.ಯವರದೋ ಹೊಸ ಧಾರಾವಾಹಿ ಶುರುವಾಯಿತೆಂದರೆ ಪ್ರಸರಣ ವಿಭಾಗದಿಂದ ನಾಲ್ಕೈದು ಸಾವಿರ ಪ್ರತಿಗಳಷ್ಟು ಪ್ರಿಂಟ್ ಆರ್ಡರ್ ಜಾಸ್ತಿಯಾಗುತ್ತಿತ್ತು. ಧಾರಾವಾಹಿ ಮುಗಿದ ನಂತರವೂ ಈ ಹೊಸ ಚಂದಾದಾರರಲ್ಲಿ ಒಂದೆರಡು ಸಾವಿರವಾದರೂ ಪತ್ರಿಕೆಯ ಖಾಯಂ ಓದುಗರಾಗಿ ಉಳಿದುಕೊಳ್ಳುತ್ತಿದ್ದರು. ಇದು ಪತ್ರಿಕೆಯ ಪ್ರಸರಣ ದೃಷ್ಟಿಯಿಂದ ಎಷ್ಟು ನಿಜವೋ ಸಾಹಿತ್ಯದ ಓದಿನ ಬೆಳಸಿನ ದೃಷ್ಟಿಯಿಂದಲೂ ಅಷ್ಟೇ ನಿಜ. ನಮ್ಮಲ್ಲಿ ಶಾಸ್ತ್ರೀಯ, ಶ್ರೇಷ್ಠ, ಅಭಿಜ್ಞಾನ, ವೈಚಾರಿಕ, ಜನಪ್ರಿಯ ಹೀಗೆ ಸಾಹಿತ್ಯವನ್ನು ವರ್ಗೀಕರಿಸಲಾಗಿದೆಯಷ್ಟೆ. ಹಾಗೆಯೇ ಓದುಗರ ವರ್ಗೀಕರಣವೂ ಇದೆ. ಮನರಂಜನೆಗಾಗಿ ಓದುವವರು, ಗಂಭೀರ ಓದುಗರು, ಸಾಹಿತ್ಯವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವವರು ಇತ್ಯಾದಿ. ಇದನ್ನು ಓದಿನ ಅಭಿರುಚಿ ಎನ್ನಬಹುದು.

ಈ ಅಭಿರುಚಿ, ಮನರಂಜನೆಯಿಂದ ಶುರುವಾಗಿ ಶಾಸ್ತ್ರೀಯ ಅಥವಾ ಕ್ಲಾಸಿಕಲ್ ಕೃತಿಗಳ ಅಧ್ಯಯನದ ಮಟ್ಟ ತಲುಪಬಹುದು. ಪ್ರಾಥಮಿಕವಾಗಿ ಓದುವ ಅಭಿರುಚಿ ಹುಟ್ಟಿಸಿ-ಬೆಳೆಸುವಲ್ಲಿ ಜನಪ್ರಿಯ ಸಾಹಿತ್ಯದ ಪಾತ್ರ ದೊಡ್ಡದು. ಜನಪ್ರಿಯ ಸಾಹಿತ್ಯದ ಓದು ಕ್ಲಾಸಿಕಲ್ ಸಾಹಿತ್ಯದ ಓದಿಗೆ ಒಂದು ಮೆಟ್ಟಿಲು ಇದ್ದಂತೆ. ಕ್ಲಾಸಿಕಲ್ ಸಾಹಿತ್ಯವೆಂದರೆ ಬೋರು ಎನ್ನುವ ಚೇಷ್ಟೆಯ ಮಾತು ವಿಮರ್ಶಾ ವಲಯದಲ್ಲಿದೆ. ಎಂದೇ ಕ್ಲಾಸಿಕಲ್ ಅಥವಾ ಶ್ರೇಷ್ಠ ಎನ್ನಬಹುದಾದ ಸಾಹಿತ್ಯ ಅಭಿರುಚಿಯೊಂದಿಗೆ ಅಪಾರ ಸಹನೆಯನ್ನೂ ಬೇಡುತ್ತದೆ. ಜನಪ್ರಿಯ ಸಾಹಿತ್ಯ ಆಸಕ್ತಿ ಅಭಿರುಚಿಗಳೊಂದಿಗೆ ಇಂಥ ಸಜಹ ಸಹನೆಯನ್ನೂ ಬೆಳೆಸಿ ಓದುಗರನ್ನು ಕ್ಲಾಸಿಕಲ್ ಸಾಹಿತ್ಯದ ಓದಿಗೆ ಭಡ್ತಿ ಪಡೆಯಲು ಅರ್ಹರನ್ನಾಗಿಸುತ್ತದೆ. ಪಂಪ, ರನ್ನ, ವಚನಕಾರರು, ಕುವೆಂಪು, ಅಡಿಗ, ಕಾರಂತ ಇಂಥವರ ಓದಿಗೆ ಇಂಥದೊಂದು ಪೂರ್ವಭಾವಿ ಸಿದ್ಧತೆ ಅಗತ್ಯವಾಗುತ್ತದೆ. ಕಾಲೇಜಿನ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಅಸಕ್ತಿ, ಹೊಸ ಅಭಿರುಚಿ, ಓದುವ ಕ್ರಮ ಇವುಗಳನ್ನು ಕಲಿಸುತ್ತಾರೆ. ಕಾಲೇಜು ವಿದ್ಯಾಥಿಗಳಲ್ಲದ ಅನ್ಯರಿಗೆ ಜನಪ್ರಿಯ ಸಾಹಿತಿಗಳು ಇಂಥ ಪಾಠಗಳನ್ನು ತಮ್ಮ ಕೃತಿಗಳ ಮೂಲಕ ಕಲಿಸುತ್ತಾರೆ. ಆದರೆ ವಿಮರ್ಶೆ ಇಂಥ ಸಾಹಿತಿಗಳನ್ನು ಮಧ್ಯಮ ಶ್ರೇಣಿಯ ಲೇಖಕರೆಂದು ಮಾನ್ಯಮಾಡುತ್ತದೆ. ಕ್ಲಾಸಿಕಲ್ ಅಥವಾ ಶ್ರೇಷ್ಠ ಸಾಹಿತ್ಯದ ಉಳಿವಿನಲ್ಲಿ, ಅದರಲ್ಲಿ ಆಸಕ್ತಿ ಬೆಳೆಸುವಲ್ಲಿ, ಓದುವ ಅಭಿರುಚಿ ಹುಟ್ಟಿಸುವಲ್ಲಿ ಜನಪ್ರಿಯ ಸಾಹಿತ್ಯದ ಕೊಡುಗೆಯಿದೆ ಎಂಬುದು ಗೌಣವಾಗಿಯೇ ಉಳಿದುಬಿಡುತ್ತದೆ. ಇದು ಜನಪ್ರಿಯ ಸಾಹಿತ್ಯದ ಒಂದು ಮುಖ ಮಾತ್ರ. ಗಟ್ಟಿಯವರು ದೊಡ್ಡ ಓದುಗ ಬಳಗವನ್ನು ಹೊಂದಿರುವ ಲೇಖಕರು. ಅವರ ಸಾಹಿತ್ಯದ ಓದುಗರಲ್ಲಿ ಮನರಂಜನೆಗಾಗಿ ಓದುವವರೂ ಇದ್ದಾರೆ, ನವವೈಚಾರಿಕರಿದ್ದಾರೆ, ಗಂಭೀರ ಓದಿನ ಸಾಹಿತ್ಯ ವಿದ್ಯಾರ್ಥಿಗಳೂ ಇರುವುದು ನನ್ನ ಗಮನಕ್ಕೆ ಬಂದಿದೆ.

ಕೆ.ಟಿ.ಗಟ್ಟಿಯವರು ದಕ್ಷಿಣ ಕನ್ನಡದ ಉಜಿರೆಯವರು. ವೃತ್ತಿಯಿಂದ ಮಾಸ್ತರರು. ಹದಿನೇಳನೆಯ ವಯಸ್ಸಿಗೇ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮಾಸ್ತರಿಕೆಯಲ್ಲಿ ತೊಡಗಿಕೊಂಡ ಗಟ್ಟಿಯವರು ಮುಂದೆ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಮೇಲೊಂದು ಬಿ.ಎಡ್., ಹಾಗೂ ಲಂಡನ್ನಿನ ಟ್ರಿನಿಟಿ ಕಾಲೇಜಿನ ಒಂದು ಡಿಪ್ಲೊಮಾ ಗಳಿಸಿ ಸುಮಾರು ಎರಡೂವರೆ ದಶಕಗಳ ಕಾಲ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸಿದವರು-ಹದಿನೆಂಟು ವರ್ಷಗಳ ಕಾಲ ಭಾರತದಲ್ಲಿ, ಒಂಬತ್ತು ವರ್ಷಗಳ ಕಾಲ ಇಥಿಯೋಪಿಯಾದಲ್ಲಿ.

ಬಹುಸಂಖ್ಯೆಯಲ್ಲಿ ಕಾದಂಬರಿಗಳನ್ನು ಬರೆದು ಜನಪ್ರೀತಿ ಗಳಿಸಿದವರು ಎಂದು ಸಾಹಿತ್ಯ ಚರಿತ್ರೆಯಲ್ಲಿ ನಮೂದಾಗಿರುವ (ಕನ್ನಡ ಸಾಹಿತ್ಯ ಚರಿತ್ರೆ-ಲೇ:ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ) ಗಟ್ಟಿಯವರ ಸಾಹಿತ್ಯ ಕೃಷಿ ಶುರುವಾದದ್ದು 1956ರಲ್ಲಿ-‘ಮುಂಗಾರು ಮುಗಿಲು’-ಸಣ್ಣ ಕಥೆ, ಮೊದಲ ಬರಹ. ಸಣ್ಣ ಕಥೆ, ಕಾದಂಬರಿ, ಕಾವ್ಯ, ಲಲಿತ ಪ್ರಬಂಧ, ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಭಾಷಾ ಶಾಸ್ತ್ರ-ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಸಾಧನೆ ಮಾಡಿರುವ ಗಟ್ಟಿಯವರು ಕಾದಂಬರಿಕಾರರಾಗಿಯೇ ಪ್ರಸಿದ್ಧರು. ಅವರ ಮೊದಲ ಕಾದಂಬರಿ ‘ಶಬ್ದಗಳು’ ಪ್ರಕಟವಾದದ್ದು 1973ರಲ್ಲಿ. ನಲವತ್ತೆಂಟು ಕಾದಂಬರಿಗಳನ್ನು ರಚಿಸಿರುವ ಗಟ್ಟಿಯವರ ‘ಕಾ ಪುರುಷ’, ‘ಅಬ್ರಾಹ್ಮಣ’, ಬಿಸಿಲ್ಗುದುರೆ’, ಕರ್ಮಣ್ಯೇವಾಧಿಕಾರಸ್ಥೆ’, ‘ಶಿಲಾತಪಸ್ವಿ’, ‘ಯುದ್ಧ’, ‘ಶ್ರುತಗಾನ, ‘ನಿರಂತರ’ ಇಂಥ ಕೃತಿಗಳು ಮನರಂಜನೆಯ ಓದಿನ ಜೊತೆಗೆ ಗಂಭೀರ ಅಧ್ಯಯನ, ವಿಮರ್ಶೆಗಳಿಗೆ ಅರ್ಹವೆನಿಸುತ್ತವೆ. ಕಾದಂಬರಿಯಲ್ಲದೆ, ಐದು ಕಥಾ ಸಂಕಲನಗಳು, ಒಂಬತ್ತು ಪ್ರಬಂಧ ಸಂಕಲನಗಳು, ಹದಿನೆಂಟು ನಾಟಕಗಳು, ಹದಿನೇಳು ಬಾನುಲಿ ನಾಟಕಗಳು, ನಾಲ್ಕಾರು ಇಂಗ್ಲಿಷ್ ಬೋಧನೆಗೆ ಸಂಬಂಧಿಸಿದ ಗ್ರಂಥಗಳು ಗಟ್ಟಿಯವರ ಸಮೃದ್ಧ ಸಾಹಿತ್ಯ ಸಾಧನೆಗೆ ನಿದರ್ಶನ.

ಕನ್ನಡದಲ್ಲಿ ಆತ್ಮಚರಿತ್ರೆಯು ಒಂದು ದಷ್ಟಪುಷ್ಟ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದ ವರ್ಣರಂಜಿತ ಇತಿಹಾಸವಿಲ್ಲ. ಹಾಗೆಂದು ಉತ್ತಮ ಆತ್ಮಚರಿತ್ರೆ ಗ್ರಂಥಗಳು ಕನ್ನಡದಲ್ಲಿ ಬಂದಿಲ್ಲವೆಂದು ಭಾವಿಸುವುದು ತಪ್ಪಾಗುತ್ತದೆ. ಮಾಸ್ತಿಯವರ ‘ಭಾವ’, ಕಾರಂತರ ‘ಸ್ಮತಿ ಪಟಲ’, ಕುವೆಂಪು ಅವರ ‘ನೆನಪಿನ ದೋಣಿಯಲಿ’, ಎ.ಎನ್.ಮೂರ್ತಿರಾಯರ ‘ಸಂಜೆಗಣ್ಣಿ ಹಿನ್ನೋಟ’, ಗೋಪಾಲ ಕೃಷ್ಣ ಅಡಿಗರ ‘ನೆನಪಿನ ಗಣಿ,’-ಇಂತಹ, ಅತ್ಮಕಥನಕ್ಕೆ ಮಾದರಿ ಎನ್ನಬಹುದಾದ ಆತ್ಮಚರಿತ್ರೆ ಗ್ರಂಥಗಳು ನಮ್ಮ ಕಣ್ಮುಂದೆ ಇವೆ. ಈಚಿನ ದಿನಗಳಲ್ಲಿ ಲಂಕೇಶ್, ಅನಂತಮೂರ್ತಿ, ಬಿ.ವಿ.ಕಾರಂತ, ಜಿ.ಎಸ್.ಆಮೂರ, ಎಚ್.ಎಸ್.ವೆಂಕಟೇಶ ಮೂರ್ತಿ,ಪ್ರತಿಭಾ ನಂದ ಕುಮಾರ್ ಮುಂತಾದವರು ಆತ್ಮಕಥೆಗಳನ್ನು ಪ್ರಕಟಿಸಿದ್ದಾರೆ. ಈಗ ಈ ಸಾಲಿನಲ್ಲಿ ಸಲ್ಲುವ ಇನ್ನೊಂದು ಹೆಸರು ಕೆ.ಟಿ.ಗಟ್ಟಿಯವರದು. ಗಟ್ಟಿಯವರ ‘ತೀರ’ ಅವರ ಭವಸಾಗರದ ತೀರ.

ಆತ್ಮಚರಿತ್ರೆ ಎಂದರೆ ವ್ಯಕ್ತಿಯೊಬ್ಬನ ಆತ್ಮಪ್ರತಿಷ್ಠೆ, ಆತ್ಮರತಿ, ಅತ್ಮಪ್ರತ್ಯಯಗಳಿಗೆ ರಹದಾರಿ ಎಂಬುದು ತಪ್ಪು. ಅದು ಆತ್ಮಕೇಂದ್ರಿತವಾದರೂ ಆತ್ಮಚರಿತ್ರಕಾರ ಈ ಸಮಾಜದ ಶಿಶುವೇ ಆದ್ದರಿಂದ ಅವನು ಒಡನಾಟ ನಡೆಸುವ ಸುತ್ತಲ ಸಮಾಜ, ಪ್ರಕೃತಿ, ಪರಿಸರಗಳೊಂದಿಗೆ ತಳಕುಹಾಕಿಕೊಂಡೇ ಇರುತ್ತದೆ. ಎಂದೇ ಮಾಸ್ತಿಯವರ ‘ಭಾವ’-ಈ ಕೃತಿಯು ಅವರು ಬದುಕಿ, ಬಾಳಿ, ಒಡನಾಡಿದ ವ್ಯಕ್ತಿಗಳ ಹಾಗೂ ವಿಷಯಗಳ ಪ್ರಪಂಚದ ಒಂದು ದಾಖಲೆಯೂ ಹೌದು ಎನ್ನುವ ಅಗ್ಗಳಿಕೆಗೆ ಪಾತ್ರವಾಗಿದೆ. ಈ ಮಾತು ಕಾರಂತ, ಕುವೆಂಪು, ಅಡಿಗರ ಆತ್ಮಕಥನಗಳಿಗೂ ಅನ್ವಯಿಸುತ್ತದೆ.ಎಚ್.ಎಸ್.ವೆಂಕಟೇಶ ಮೂರ್ತಿಯವರಂತೂ ಇದನ್ನು ‘ಅನಾತ್ಮ’ ಕಥನವೆಂದು ಕರೆದು ಸಮಾಜದ ಆತ್ಮವನ್ನೇ ಅನಾವರಣಗೊಳಿಸಿದ್ದಾರೆ. ಆತ್ಮಕಥೆಯ ಈ ಸಾಮಾಜಿಕ ಹಾಗೂ ವ್ಯಕ್ತಿಗತ ಸಂಬಂಧಗಳ ಹಾಸುಹೊಕ್ಕು ಗಟ್ಟಿಯವರಿಗೆ ವೇದ್ಯವಾಗಿರುವ ಸಂಗತಿಯೇ ಆಗಿದೆ.ಆತ್ಮಕಥೆಯಲ್ಲಿ ಕೂಡ ‘ನಾನು’ ಎಂಬ ಭಾವ ನನಗೆ ಮುಖ್ಯವಲ್ಲ.ಅನುಭವದ ವಿಶ್ಲೇಷಣೆ, ಪುನರ್ವಿಮರ್ಶೆ ಮುಖ್ಯ ಎನ್ನುತ್ತಾರೆ ಗಟ್ಟಿಯವರು. ಕೊನೆಯಲ್ಲಿ ‘‘ಇದು ಆತ್ಮಕಥೆಯಲ್ಲ, ಆತ್ಮಚಿಂತನೆ’’ ಎಂಬ ನಿವೇದನೆಯೂ ಇದೆ. ಇಂತಹ ವಿಶ್ಲೇಷಣೆ, ವಿಮರ್ಶೆ, ಚಿಂತನೆಗಳು ‘ತೀರದ’ ತಿರುಳೇ ಆಗಿದೆ.

‘ತೀರ’ ಅನೌಪಚಾರಿಕ ಮಾದರಿಯ ಆತ್ಮಕಥೆ. ಉದಾಹರಣೆಗೆ ಹೇಳುವುದಾದರೆ ಹುಟ್ಟಿದ ದಿನಾಂಕ, ವರ್ಷ, ಓದು-ವಿದ್ಯಾಭ್ಯಾಸ, ವಿವಾಹ, ವೃತ್ತಿ ಹೀಗೊಂದು ಕಾಲಾನುಕ್ರಮಣಿಕೆಯ ಗತಿಯಲ್ಲಿ ಸಾಗುವ ಬರವಣಿಗೆ ಇದಲ್ಲ. ಆದರೆ ಇವೆಲ್ಲವೂ ಇದರಲ್ಲಿದೆ. ತಂದೆ-ತಾಯಿ,ಅಕ್ಕ-ತಮ್ಮ-ಬಾವ-ಬಡತನ-ಶ್ರೀಮಂತಿಕೆ, ವಿದ್ಯಾರ್ಥಿ ದಿನಗಳ ಬವಣೆಗಳು, ಮೇಲಧಿಕಾರಿಗಳು-ಕೆಳಗಿನವರ ಅನುಸಂಧಾನಗಳು, ಇವೆಲ್ಲವೂ ಇಲ್ಲಿ ಗಟ್ಟಿಯವರ ಆತ್ಮದರ್ಪಣದ ಮುಖೇನ ಬಿಡಿಬಿಡಿ ನೋಟಗಳಾಗಿ ಕಾಣಿಸಿಕೊಳ್ಳುತ್ತವೆ. ಈ ಆತ್ಮ ದರ್ಪಣ ಸಮಾಜದ ಸೌಮ್ಯ-ಅಕರಾಳವಿಕರಾಳ ಮುಖಗಳೆರಡನ್ನೂ ತೋರಿಸುವ ಭೂತಕನ್ನಡಿಯಿದ್ದಂತೆ. ಇದರೊಳಗೆ ಸಾಗಿಬರುವವರೆಲ್ಲರೂ, ಎಲ್ಲ ಘಟನೆಗಳೂ ಗಟ್ಟಿಯವರ ನಿಷ್ಠುರ ವಿಮರ್ಶೆಯ ಒರೆಗಲ್ಲ ಸಾಣೆ ಹಿಡಿಸಿಕೊಂಡೇ ಓದುಗರೆದುರು ಪ್ರತ್ಯಕ್ಷ. ಇಲ್ಲಿ ನಾವು ಕಾಣುವ ಸಾಮಾಜಿಕ ಸಂಬಂಧಗಳ ನಿಷ್ಠುರ ವಿಮರ್ಶೆಯಲ್ಲಿ ವ್ಯಂಗ್ಯದ ಮೊನಚು ಇದೆ ಹಾಗೆಯೇ ವಿಶ್ಲೇಷಣೆಯಲ್ಲಿ ತಾತ್ವಿಕತೆಯ, ವೈಚಾರಿಕತೆಯ ‘ಗಟ್ಟಿ’ತನವಿದೆ. ಮಕ್ಕಳು ಮಾಡಬಹುದಾದ ಅತಿ ಘೋರವಾದ ಆಪಾದನೆಯೆಂದರೆ, ಬಹುಶಃ, ‘‘ನನ್ನನ್ನು ಯಾಕೆ ಹುಟ್ಟಿಸಿದೆ ಎಂಬುದೇ ಆಗಿರಬಹುದು’’ ಎನ್ನುವ ಗಟ್ಟಿಯವರ ಸಂತಾನ ಕುರಿತ ಈ ಮಾತುಗಳನ್ನು ಗಮನಿಸಿ:

 ‘‘....ಆದರೆ ಮಕ್ಕಳು ಹುಟ್ಟುವುದು ಸಂಭೋಗದ ಉಪ ಉತ್ಪನ್ನವಾಗಿ ಅಲ್ಲ. ಬದುಕಿನಲ್ಲಿ ಪರಮಾನಂದವೆಂಬುದಿರುವುದು ಸಂಭೋಗದಲ್ಲಿ ಮಾತ್ರ ಎಂಬುದು ಅದರಲ್ಲಡಗಿರುವ ಅರ್ವಚನೀಯ ಸುಖ ಮತ್ತು ಅಷ್ಟೇ ಅರ್ವಚನೀಯವೂ ಅನಿವಾರ್ಯವೂ ಆದ ದುಃಖ ವನ್ನು ತಿಳಿಯದವರು ಮಾಡಿಕೊಳ್ಳುವ ಅಪಕಲ್ಪನೆ. ಈ ಅಪಕಲ್ಪನೆ ಎಲ್ಲಿಯವರೆಗೆ ಇರುತ್ತದೆಂದರೆ ಅವರೂ ಹೆತ್ತವರಾಗುವವರೆಗೆ ಇರುತ್ತದೆ. ಆಗ ಅವರಿಗೂ ತಿಳಿಯುತ್ತದೆ ಮಕ್ಕಳನ್ನು ಪಡೆಯುವುದರಲ್ಲಿ ಸುಖ ಅಥವಾ ದುಃಖ ಎಂದು ಪ್ರತ್ಯೇಕಿಸಿ ಹೇಳಲಾಗದಂಥದು ಏನೋ ಇದೆ ಎಂದು. ಮಕ್ಕಳನ್ನು ಹೆತ್ತು ಸಲಹಿ ಬೆಳೆಸುವುದರಲ್ಲಿ ಎಷ್ಟು ಕಷ್ಟ ಮತ್ತು ದುಃಖ ಅಡಗಿದೆ ಎಂದರೆ, ಅದರಲ್ಲಿ ಇರುವ ಸುಖ ಅದಕ್ಕಿಂತ ಕಿರಿದು ಎಂದು ಹೆತ್ತವರೆಲ್ಲರಿಗೂ ಗೊತ್ತು. ಆದರೆ ಆ ಸುಖಕ್ಕೆ ಆ ದುಃಖವನ್ನು ಮರೆಸುವ ವಿಶಿಷ್ಟವಾದ ಶಕ್ತಿ ಇದೆ. ಮನುಷ್ಯ ಅದಕ್ಕೋಸ್ಕರ ಮಕ್ಕಳನ್ನು ಪಡೆಯುತ್ತಾನೆ.’’(ಪುಟ47-48)

‘ತೀರ’ಕ್ಕೆ ಬಂದು ಅಪ್ಪಳಿಸುವ ಬಹುತೇಕ ಅಲೆಗಳು, ಮನುಷ್ಯ ಸಂಬಂಧಗಳನ್ನು, ಸ್ವಭಾವಗಳನ್ನು, ದೇವರು-ಧರ್ಮಗಳನ್ನು ಸರಕಾರ-ಸಾರ್ವಜನಿಕ ಜೀವನದಕಾರ್ಯಕ್ಷಮತೆ ಇತ್ಯಾದಿಗಳನ್ನು ವಿವರಿಸುವುದರೊಂದಿಗೆ, ವಿಶ್ಲೇಷಣೆಗಳೊಂದಿಗೆ ನಮಗೆ ತಾಕುತ್ತವೆ. ಪಾವೆಂ ಅವರ ‘ನಿರಂತರ’ ಪುಸ್ತಕ ವಿಮರ್ಶೆ, ಕೋ.ಲ.ಕಾರಂತರ ಓದಿನ ಅಭಿರುಚಿ, ಲಂಕೇಶರ ಭೇಟಿ, ದೇವರು-ಧರ್ಮ ಕುರಿತ ಲೇಖಕರ ನಿಲುವು, ಇಥಿಯೋಪಿಯಾದ ಸೈಂಟಿಫಿಕ್ ಸೋಶಿಯಲಿಸಂ ಇಂಥ ಹಲವಾರು ನೋಟಗಳೂ ಈ ದರ್ಪಣದ ಮೂಲಕ ಪ್ರತಿಫಲಿತವಾಗಿವೆ. ‘‘ಆಸ್ತಿಕ-ನಾಸ್ತಿಕ ಶಬ್ದಗಳು ಇವತ್ತು ಹೆಚ್ಚುಕಡಿಮೆ ಸತ್ತಿವೆ.....ಬದುಕಿನಲ್ಲಿ ಒಂದು ಬಾರಿ ಬದುಕಿಗಾಗಿ ಭಿಕ್ಷೆಗೆ ಕೈ ನೀಡಬೇಕಾಗಿ ಬಂದ ಮೇಲೆ ಯಾವ ಪೂಜೆ, ಪುನಸ್ಕಾರ, ಮಾನ ಸನ್ಮಾನದಲ್ಲಿಯೂ ನನಗೆ ಅರ್ಥ ಕಾಣಿಸುವುದಿಲ್ಲ. ಭಿಕ್ಷೆ ಬೇಡುವುದೆಂದರೆ ಒಂದು ಬಗೆ ಆತ್ಮಹತ್ಯೆ ಅಂತಹ ಆತ್ಮಹತ್ಯೆ ಮಾಡಿಕೊಂಡು ಆತ್ಮವನ್ನು ಮತ್ತೆ ನವೀಕರಿಸಿಕೊಂಡೆ’’ ಎಂಬ ಆತ್ಮವಿಮರ್ಶೆಯೂ ಇಲ್ಲಿದೆ. ‘‘ಅಷ್ಟಮಿಯ ದಿನ ಮುಸಲ್ಮಾನರು ಹಿಂದೂ ಜನರ ಜೊತೆ ಹಾಡಿ ಕುಣಿಯಬಹುದಾದರೆ, ಈದ್ ದಿನ ಹಿಂದೂ ಜನರು ಮುಸಲ್ಮಾನರ ಜೊತೆ ಹಾಡಿಕುಣಿಯಲು ಆಗದೆ?’’ ಎಂಬ ಇಂದಿಗೆ ಬಲು ಪ್ರಸ್ತುತವಾದ ಚಿಂತನೆಯೂ ಇದೆ.

ಇದು ‘ತೀರ’ದ ಗೋಷ್ವಾರೆ ನೋಟವಷ್ಟೆ.ಸಮಗ್ರ ನೋಟ ಹಿಡಿಯಲು ಈ ಅಂಕಣದಲ್ಲಿ ಸಾಧ್ಯವಾಗದು. ಹೀಗೊಂದು ‘ತೀರ’ದ ದರ್ಶನ ಮಾಡಿಸಿದ ಗಟ್ಟಿಯವರಿಗೂ ಪ್ರಕಟಿಸಿದ ‘ಅಂಕಿತ’ದವರಿಗೂ ಅಭಿನಂದನೆಗಳು. ಗಟ್ಟಯವರಿಗೆ ಹಲವಾರು ಪ್ರಶಸ್ತಿ ಸಮ್ಮಾನಗಳು ಸಂದಿವೆ. ಆ ಯಾದಿ ಪ್ರಕಟಿಸಲು ಇಲ್ಲಿ ಸ್ಥಳಾವಕಾಶವಿಲ್ಲ. ಆದರೆ ಒಂದು ಪ್ರಸಂಗವನ್ನು ಹೇಳಲೇ ಬೇಕೆನ್ನಿಸುತ್ತಿದೆ. ಗಟ್ಟಿಯವರು ಮಾತು-ಕೃತಿ ಎರಡರಲ್ಲೂ ನೇರ ನಡೆ-ನಿಷ್ಠುರ ನುಡಿ ಮತ್ತು ಪ್ರಾಮಾಣಿಕತೆಗಳಿಗೆ ಬದ್ಧರಾದವರು. ಗಟ್ಟಿಯವರು ತಮ್ಮದೊಂದು ನಾಟಕಕ್ಕೆ ನನ್ನಿಂದ ಮುನ್ನುಡಿ ಬಯಸಿದರು. ಮುನ್ನುಡಿ ಬರೆದುಕೊಟ್ಟೆ. ಅಲ್ಲಿಗೇ ಮರೆತೇ ಹೋಯಿತು. ಕೆಲವು ವರ್ಷಗಳ ನಂತರ ನೆನಪಾಯಿತು. ಗಟ್ಟಿಯವರ ನಾಟಕ ಪ್ರಕಟವಾಯಿತೇ? ನನ್ನ ಮುನ್ನುಡಿಯನ್ನು ಅವರು ಬಳಸಿಕೊಂಡಿದ್ದಾರೆಯೇ? ಏಕೆಂದರೆ ನನ್ನಿಂದ ಮುನ್ನುಡಿ ಬರೆಸಿಕೊಂಡ ಒಬ್ಬಿಬ್ಬರು ಪುಸ್ತಕ ಪ್ರಕಟವಾದಾಗ ಒಂದು ಸೌಜನ್ಯದ ಪ್ರತಿಯನ್ನೂ ಕಳುಹಿಸದೇ ಇರುವುದೂ ಉಂಟು. ಹೀಗಾಗಿ ಒಂದು ದಿನ ಫೋನಿಸಿ ‘‘ನಾನು ಮುನ್ನುಡಿ ಬರೆದ ನಾಟಕ ಏನಾಯಿತು’’ ಎಂದು ಕೇಳಿದೆ.

ಮುಂದೊಂದು ದಿನ ಆ ನಾಟಕ ಪ್ರಕಾಶಗೊಂಡಿತು. ‘‘ನಾಟಕಕ್ಕೆ ಮುನ್ನುಡಿಯನ್ನು ಬರೆದುಕೊಟ್ಟ ಜಿ.ಎನ್.ರಂಗನಾಥ ರಾವ್, ‘ನಾನು ಮುನ್ನಡಿ ಬರೆದ ನಾಟಕ ಏನಾಯಿತು’ ಎಂದು ಗದರಿಸಿ ಕೇಳಿದ್ದಾರೆಂದು ಗಟ್ಟಿಯವರು ತಮ್ಮ ‘ಮೊದಲಮಾತಿ’ನಲ್ಲಿ ತಿಳಿಸಿದ್ದರು. ಹೌದೆ, ನಾನು ಗದರಿಸಿ ಕೇಳಿದೆನೇ ಎಂದು ನನಗೆ ಕ್ಲೇಶವಾಯಿತು. ಗಟ್ಟಿಯವರ ನಾಟಕ ಬೇಗ ಪ್ರಕಟವಾಗಲಿ ಎಂಬುದಷ್ಟೆ ನನ್ನ ಕಳಕಳಿಯಾಗಿತ್ತು. ಈ ಕಳಕಳಿ ಗದರಿಕೆಯಾಗಿದ್ದಕ್ಕೆ ನನಗೆ ತುಂಬ ಹಿಂಸೆಯಾಗತೊಡಗಿತು.ಗದರಿಕೆಯಾಗಿದ್ದರೆ ಮನ್ನಿಸಿ ಗಟ್ಟಿಯವರೆ ಎಂದು ಈಗ ಅದರಿಂದ ಮುಕ್ತನಾಗುತ್ತಿದ್ದೇನೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News