ಲೋಕಸಭಾ ಚುನಾವಣೆ: ಕಾರಿನ ಟಯರ್ ನೊಳಗೆ 2.3 ಕೋಟಿ ರೂ. ಸಾಗಾಟ!

Update: 2019-04-21 10:30 GMT

ಬೆಂಗಳೂರು, ಎ.21: ದೇಶಾದ್ಯಂತ ಲೋಕಸಭಾ ಚುನಾವಣೆ ವೇಳೆ ಆದಾಯ ತೆರಿಗೆ ಅಧಿಕಾರಿಗಳು ಭಾರೀ ಮೊತ್ತದ ನಗದು ವಶಪಡಿಸಿಕೊಳ್ಳುತ್ತಿದ್ದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾರಿನ ಹೆಚ್ಚುವರಿ ಟಯರ್ ನಲ್ಲಿ (ಸ್ಟೆಪ್ನಿ) ಅಡಗಿಸಿ ಸಾಗಿಸುತ್ತಿದ್ದ 2.3 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ನಗದು ಸಾಗಿಸಲಾಗುತ್ತಿದೆ ಎಂಬ ಗುಪ್ತಚರ ಮಾಹಿತಿ ಪಡೆದ ಅಧಿಕಾರಿಗಳು ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ, ಹೆಚ್ಚುವರಿ ಟಯರ್ ನಲ್ಲಿ ತುಂಬಿಸಿ ನಗದು ಸಾಗಿಸುತ್ತಿರುವುದು ಪತ್ತೆಯಾಯಿತು. ಅಧಿಕಾರಿಗಳು ಟಯರ್ ವಶಪಡಿಸಿಕೊಂಡಿದ್ದು, 2,000 ರೂಪಾಯಿಯ ನೋಟುಗಳು ಭರ್ತಿಯಾಗಿದ್ದವು. ಟಯರ್ ನಲ್ಲಿ ಇಂತಹ 20 ಕಂತೆಗಳು ಪತ್ತೆಯಾದವು.

ಚುನಾವಣೆಯಲ್ಲಿ ವಿತರಿಸುವ ಸಲುವಾಗಿ ವ್ಯಕ್ತಿಯೊಬ್ಬ ಒಂದು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾನೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ. ನಗದು ಸಾಗಿಸುವ ಹಾಗೂ ವಿತರಿಸುವ ಹೊಣೆ ಹೊತ್ತಿದ್ದ ಈ ವ್ಯಕ್ತಿ ಎಲ್ಲ ನೋಟಿನ ಕಂತೆಗಳಿಂದ ಕೆಲ ನೋಟುಗಳನ್ನು ಲಪಟಾಯಿಸಿರುವುದು ಕಂಡುಬಂದಿದೆ. ಅಕ್ರಮ ಹಣ ಸಾಗಾಣಿಕೆಯಲ್ಲಿ ಕೂಡಾ ಸೋರಿಕೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ಹಾಗೂ ಗೋವಾದಲ್ಲಿ ಶನಿವಾರ ಒಟ್ಟು ನಾಲ್ಕು ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News