ಅಲ್ ಅಮೀನ್ ಸಂಸ್ಥೆಯ ಸಾರ್ಥಕ ಸೇವೆ: 24 ಬಡ ಕನ್ಯೆಯರ ಸಾಮೂಹಿಕ ವಿವಾಹ

Update: 2019-04-21 12:05 GMT

ಮಡಿಕೇರಿ, ಎ.21: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿನ 24 ಬಡ ಕನ್ಯೆಯರ ಸಾಮೂಹಿಕ ವಿವಾಹ ಸಮಾರಂಭ ನಗರದ ಕಾವೇರಿ ಹಾಲ್‍ನಲ್ಲಿ ಸಂಭ್ರಮದಿಂದ ನೆರವೇರಿತು.

ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷರಾದ ಎಫ್.ಎ.ಮೊಹಮ್ಮದ್ ಹಾಜಿ, ಸಮಿತಿಯ ಮಹಾ ಪೋಷಕರು ಹಾಗೂ ಮಾಜಿ ಶಾಸಕರಾದ ಕೆ.ಎಂ. ಇಬ್ರಾಹಿಂ ಮತ್ತು ಗಣ್ಯರ ಸಮ್ಮುಖದಲ್ಲಿ ಕೇರಳದ ವಡಗರದ ಅಬ್ದುಲ್ ಸಲಾಂ ಖಾಸಿಮಿ ತಂಙಳ್ ಮತ್ತು ಮೊಹಮ್ಮದ್ ಫೈಝಿ ಅವರ ನೇತೃತ್ವದಲ್ಲಿ ‘ನಿಖಾ’ ಕಾರ್ಯಕ್ರಮ ನಡೆಯಿತು. 

ಸಾಮೂಹಿಕ ವಿವಾಹದಲ್ಲಿ ಮಡಿಕೇರಿ, ಕುಶಾಲನಗರ, ಕೊಪ್ಪ, ಗೊಂದಿ ಬಸವನಹಳ್ಳಿ, ಕರ್ಣಂಗೇರಿ, ರಂಗಸಮುದ್ರ, ಕಾನ್‍ಬೈಲ್, ಬೆಂಬಳೂರು, ಹೊಸಕೋಟೆ, ಕಂಡಕೆರೆ, ಕಡಗದಾಳು, ಶನಿವಾರಸಂತೆ, ಕೊಡ್ಲಿಪೇಟೆ, ನಾಪೋಕ್ಲು, ಅಭ್ಯತ್‍ಮಂಗಲ, ಗರಗಂದೂರು, ಗೋಣಿಕೊಪ್ಪ, ತಿತಿಮತಿ ಮತ್ತು ಪಿರಿಯಾಪಟ್ಟಣದ 24 ಬಡ ಮತ್ತು ಅನಾಥ ಹೆಣ್ಣು ಮಕ್ಕಳು ನವಜೀವನಕ್ಕೆ ಕಾಲಿರಿಸಿದರು. ವಿವಾಹದ ಹಿನ್ನೆಲೆಯಲ್ಲಿ ಪ್ರತಿ ವಧುವಿಗೆ ಸಮಿತಿಯಿಂದ 5 ಪವನ್ ಚಿನ್ನಾಭರಣ, ಉಡುಪು ಮತ್ತು ವರನಿಗೆ ವಸ್ತ್ರಗಳನ್ನು ಉಚಿತವಾಗಿ ಒದಗಿಸಿರುವುದು ವಿಶೇಷ. 

ಸರಳ ವಿವಾಹಕ್ಕೆ ಒತ್ತು ನೀಡಿ- ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿದ ಸಮಿತಿಯ ಮಹಾಪೋಷಕರು ಹಾಗೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾತನಾಡಿ, ಲಕ್ಷಾಂತರ ಹಣವನ್ನು ವಿವಾಹ ಸಮಾರಂಭಕ್ಕೆ ವ್ಯಯಿಸುವುದಕ್ಕೆ ಬದಲಾಗಿ, ಸರಳ ವಿವಾಹಕ್ಕೆ ಒತ್ತು ನೀಡುವ ಅಗತ್ಯವಿದೆಯೆಂದು ಅಭಿಪ್ರಾಯಿಸಿದರು.

ದಶಕಗಳ ಹಿಂದೆ ಲತೀಫ್ ಹಾಜಿ ಅವರಿಂದ ಸ್ಥಾಪಿಸಲ್ಪಟ್ಟ ಅಲ್ ಅಮೀನ್ ಸಂಘಟನೆ ವರ್ಷಂಪ್ರತಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಯೋಜನೆಗೆ ಒಂದೆರಡು ತಿಂಗಳ ಕಾಲ ಅವಿಶ್ರಾಂತವಾಗಿ ಶ್ರಮಿಸುವ ಬಗ್ಗೆ ಮೆಚ್ಚುಗೆ ವ್ಯಕಪಡಿಸಿ, ಸಮಾಜದ ಬಡ ವರ್ಗದ ಮತ್ತು ಅನಾಥ ಹೆಣ್ಣು ಮಕ್ಕಳಿಗೆ ನೂತನ ಬದುಕನ್ನು ಕಟ್ಟಿಕೊಡುವ ಸಮಿತಿಯ ಪ್ರ್ರಯತ್ನಕ್ಕೆ ಸಾಕಷ್ಟು ಮಂದಿ ದಾನಿಗಳು ನೆರವನ್ನು ನೀಡುತ್ತಾ ಬರುತ್ತಿದ್ದಾರೆ. ಮತ್ತಷ್ಟು ಮಂದಿ ಇಂತಹ ವಿವಾಹ ಕಾರ್ಯಗಳ ಆಯೋಜನೆಗೆ ನೆರವಿನ ಹಸ್ತವನ್ನು ನೀಡುವ ಅಗತ್ಯವಿದೆಯೆಂದು ಅನಿಸಿಕೆ ವ್ಯಕ್ತಪಡಿಸಿದರು.

ಬಡ, ಅನಾಥ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವಾಗುವುದು ಬದುಕಿನ ಉತ್ತಮ ಕಾರ್ಯಗಳಲ್ಲಿ ಒಂದು ಎಂದು ಅಭಿಪ್ರಾಯಿಸಿದ ಕೆ.ಎಂ. ಇಬ್ರಾಹಿಂ, ಪ್ರಸ್ತುತ ವ್ಯವಸ್ಥೆಯಲ್ಲಿ ದೇವರ ಇಚ್ಛೆಗೆ ವಿರುದ್ಧವಾದ ಕೆಲಸ ಕಾರ್ಯಗಳನ್ನು ನಡೆಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಸಲ್ಲದ ಕಾರ್ಯಗಳ ಹಿನ್ನೆಲೆಯಲ್ಲಿ ಪ್ರಕೃತಿ ಮುನಿದು ಅನಾಹುತಗಳು ಘಟಿಸುತ್ತಿರುವುದಾಗಿ ತಿಳಿಸಿ, ದೇವರು ಮೆಚ್ಚುವ ಒಳಿತಿನ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬದ್ರಿಯಾ ಮಸೀದಿಯ ಖತೀಬರಾದ ಉಮರ್ ಸಖಾಫಿ ಮಾತನಾಡಿ, ಕಳೆದ 13 ವರ್ಷಗಳಲ್ಲಿ ಅಲ್ ಅಮೀನ್ ಸಂಸ್ಥೆ ನೂರಾರು ಬಡ ಮತ್ತು ಅನಾಥ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸುವ ಮೂಲಕ ಅವರೆಲ್ಲರಿಗೂ ಹೊಸ ಬದುಕನ್ನು ಕಲ್ಪಸಿಕೊಡುವ ಉತ್ತಮ ಕಾರ್ಯ ಮಾಡಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ದಾನಿಗಳಾದ ಚೇರಂಬಾಣೆಯ ಮಮ್ಮು ಹಾಜಿ ಅವರು ಮಾತನಾಡಿದರು. ಸಮಿತಿಯ ಪ್ರಮುಖರಾದ ಎಂ.ಇ. ಮುಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಲ್ ಅಮೀನ್ ಸಂಸ್ಥೆ ಕಳೆದ 13 ವರ್ಷಗಳಲ್ಲಿ  ವರ್ಷಕ್ಕೆ ಅಂದಾಜು 25 ರಂತೆ 331 ಅನಾಥ ಮತ್ತು ಬಡ ಹೆಚ್ಚು ಮಕ್ಕಳ ವಿವಾಹವನ್ನು ನಡೆಸಿಕೊಡುವ ಕಾರ್ಯವನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಈ ಸಾಮೂಹಿಕ ವಿವಾಹದ ಮೂಲಕ ಬದುಕು ಕಟ್ಟಿಕೊಮಡಿರುವ ದಂಪತಿಗಳ ವಿಶೇಷ ಸಭೆಯನ್ನು ನಡೆಸುವ ಉದ್ದೇಶ ಇರುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಸುಬೇದಾರ್ ಮೇಜರ್(ನಿವೃತ್ತ) ಸಿ.ಎಂ.ಸೋಮಯ್ಯ, ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಾದ ಎಫ್.ಎಂ.ಮುಹಮ್ಮದ್ ಹಾಜಿ, ಪೆರುಂಬಾಡಿ ಯತೀಂ ಖಾನದ ಅಧ್ಯಕ್ಷ ಬಶೀರ್ ಹಾಜಿ, ದಾನಿಗಳಾದ ಚೆನ್ನೈನ ಉದ್ಯಮಿ ಸದಕ್ ಆಲಿ, ಉದ್ಯಮಿ ಎಸ್.ಎಂ.ಹುಸೈನ್ ಸೇರಿದಂತೆ ಹಲ ಗಣ್ಯರು ಉಪಸ್ಥಿತರಿದ್ದರು. ಬದ್ರಿಯಾ ಮಸೀದಿ ಖತೀಬಬ್ ಉಮರ್ ಸಖಾಫಿ ಪ್ರಾರ್ಥಿಸಿ, ಸಮಿತಿಯ ಪ್ರಚಾರ ಕಾರ್ಯದರ್ಶಿ ಎಂ.ಇ.ಮೊಯಿದ್ದೀನ್ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News