×
Ad

ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ: ಬಸವರಾಜ ಹೊರಟ್ಟಿ ಆರೋಪ

Update: 2019-04-21 18:06 IST

ಹುಬ್ಬಳ್ಳಿ, ಎ.21: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಅಲ್ಲದೆ ಬಿಜೆಪಿಯ ಶಾಸಕ ಅರವಿಂದ ಬೆಲ್ಲದ ಜಾತಿಯ ಕುರಿತಾಗಿ ಸಭೆ ನಡೆಸಿ ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಬಗ್ಗೆ ಆಪಾದನೆ ಮಾಡುವುದು ಸರಿಯಲ್ಲ ಎಂದು ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಕ್ಷೇಪಿಸಿದ್ದಾರೆ.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಧರ್ಮದ ಹೋರಾಟದ ಅಸ್ತ್ರವನ್ನು ಹಿಡಿದು ಬಿಜೆಪಿ ರಾಜಕಾರಣ ಮಾಡುತ್ತಿರುವುದು ಖಂಡನೀಯವಾಗಿದೆ. ಅಲ್ಲದೇ ಮಠ ಮಾನ್ಯಗಳು ಎಲ್ಲರಿಗೂ ಸಮಾನವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯವರು ಮೈತ್ರಿ ಪಕ್ಷದ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಪ್ರಹ್ಲಾದ್ ಜೋಶಿಯವರಿಂದ ಲಿಂಗಾಯತ ಧರ್ಮಕ್ಕೆ ಅನ್ಯಾಯವಾಗಿದೆ ಎಂಬ ವಿನಯ್ ಕುಲಕರ್ಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಕಾಂಗ್ರೆಸ್ ಪಕ್ಷ ಲಿಂಗಾಯತ ಧರ್ಮವನ್ನು ತುಳಿಯುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದಕ್ಕೆ ವಿನಯ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ ವಿನಃ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಜಾತ್ಯತೀತ ರಾಜಕೀಯ ಪಕ್ಷಗಳಾಗಿವೆ. ಧರ್ಮ ಹೋರಾಟವೇ ಬೇರೆ, ರಾಜಕೀಯವೇ ಬೇರೆ ಒಂದಕ್ಕೊಂದು ಸಂಬಂಧವಿಲ್ಲ ಎಂದರು.

ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಅವರು, ಸಚಿವ ಸ್ಥಾನ ಸಿಗಬೇಕಿತ್ತು, ಸಿಗಲಿಲ್ಲ. ಅಲ್ಲದೇ ಸಭಾಪತಿ ಸ್ಥಾನ ಕೂಡ ಕೈ ತಪ್ಪಿದ್ದು ಸ್ವಲ್ಪಮಟ್ಟಿನ ಅಸಮಾಧಾನವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಮಾತನಾಡಿ, ಲಿಂಗಾಯತ ಧರ್ಮ ಒಡೆಯುವಲ್ಲಿ ಪ್ರಹ್ಲಾದ ಜೋಶಿಯವರು ದೊಡ್ಡ ಮಟ್ಟದ ಅನ್ಯಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಯಲ್ಲಿ ಲಿಂಗಾಯತರಿಗೆ ಯಾವುದೇ ಕಿಂಚಿತ್ತೂ ಕಾಳಜಿ ಕೂಡ ತೋರಿಲ್ಲ. ಬಿಜೆಪಿಯವರು ತಮ್ಮ ಪಕ್ಷದ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಿ.ಸಿ.ಸಿದ್ದನಗೌಡರ, ಬಾಬುಗೌಡ ಪಾಟೀಲ, ನಾಗರಾಜ ಛಬ್ಬಿ, ರಾಜಣ್ಣ ಕೊರವಿ, ಬಂಗಾರೇಶ ಹಿರೇಮಠ, ರಜತ್ ಉಳ್ಳಾಗಡ್ಡಿಮಠ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News