ಹಿರಿಯ ಸಾಹಿತಿ ಡಾ.ಜಿ.ವಿ.ದಾಸೇಗೌಡ ನಿಧನ

Update: 2019-04-21 14:22 GMT

ಮಂಡ್ಯ, ಎ.21: ಹಿರಿಯ ಸಾಹಿತಿ, ಜಾನಪದ ತಜ್ಞ ಜಿ.ವಿ.ಡಿ ಎಂಬ ಕಾವ್ಯನಾಮದಿಂದ ಹೆಸರಾಗಿದ್ದ ಡಾ.ಜಿ.ವಿ.ದಾಸೇಗೌಡ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. 

ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದ ಜಿ.ವಿ.ಡಿ ನಿಧನದಿಂದ ಜಾನಪದ ಕ್ಷೇತ್ರದ ಮತ್ತೊಂದು ಕೊಂಡಿ ಕಳಚಿದಂತಾಗಿದೆ. 
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರವಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಮಂಡ್ಯ ನಗರದ ಗುತ್ತಲುವಿನಲ್ಲಿ ಸಂಜೆ ಮೃತರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನೆರವೇರಿತು. 

ಪುತ್ರಿ, ಇಬ್ಬರು ಗಂಡು ಮಕ್ಕಳು ಸೇರಿ ಅಪಾರ ಸಾಹಿತ್ಯ ಅಬಿಮಾನಿಗಳನ್ನು ಅಗಲಿರುವ ದಾಸೇಗೌಡರು, ಜಾನಪದ ಮತ್ತು ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ 65ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಕನ್ನಡವಷ್ಟೇ ಅಲ್ಲದೇ ಇಂಗ್ಲಿಷ್, ಹಿಂದಿ, ಸಂಸ್ಕೃತ, ಪ್ರಾಕೃತ ಭಾಷೆಗಳನ್ನು ಬಲ್ಲ ಅವರು, ಕನ್ನಡ ಪ್ರಾದ್ಯಾಪಕರಾಗಿ ಮಂಡ್ಯದ ಕೆ.ಎಂ.ದೊಡ್ಡಿ, ಮಡಿಕೇರಿ, ತುಮಕೂರು, ಮಂಡ್ಯ, ಮತ್ತಿತರ ಸರಕಾರಿ ಕಾಲೇಜುಗಳಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 

ಅಂತಾರಾಷ್ಟ್ರೀಯ ಜಾನಪದ ಶಿಬಿರಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದರು. ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮತ್ತು ಕೊಪ್ಪಳ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಮೈಸೂರು ವಿವಿಯಲ್ಲಿ ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಡಾ. ಜಿ.ವಿ.ಡಿ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಜಾನಪದ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳು, ಜಿಲ್ಲಾಡಳಿತಗಳು, ಜಾನಪದ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿ ಸನ್ಮಾನಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News