ಬಿಜೆಪಿಗೆ ಮತ ಹಾಕದಂತೆ ಜನಜಾಗೃತಿ: ಪ್ರೊ.ರವಿವರ್ಮ ಕುಮಾರ್

Update: 2019-04-21 14:36 GMT

ಗದಗ, ಎ.21: ರಾಜಕಾರಣದಲ್ಲಿ ಧರ್ಮವನ್ನು ಬೆರೆಸುವ ಮೂಲಕ ಸಂವಿಧಾನದ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಬಿಜೆಪಿಗೆ ಮತ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ತಿಳಿಸಿದರು.

ರವಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಒಮ್ಮೆಯ ಸುದ್ದಿಗೋಷ್ಟಿ ನಡೆಸಿಲ್ಲ. ಪತ್ರಕರ್ತರಿಗೆ ಪ್ರಶ್ನಿಸುವಂತಹ ಅಧಿಕಾರವನ್ನೆ ನೀಡಿಲ್ಲ. ಪ್ರಧಾನಿ ಮೋದಿಯ ಈ ವರ್ತನೆಗಳಿಂದ ದೇಶದ ಸಂವಿಧಾನ ಮತ್ತು ಮಾಧ್ಯಮ ಸ್ವಾತಂತ್ರ ಗಂಡಾತರದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸದಾ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವ ಅನಂತ ಕುಮಾರ್ ಹೆಗಡೆಗೆ ಕೇಂದ್ರದಲ್ಲಿ ಸಚಿವ ಸ್ಥಾನ ಹಾಗೂ ಬಾಂಬ್‌ಸ್ಪೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ಞಾಸಿಂಗ್ ಲೋಕಸಭೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಸಂವಿಧಾನ ವಿರೋಧಿಗಳನ್ನು ನೇರವಾಗಿ ಬೆಂಬಲಿಸಿದೆ. ಹೀಗಾಗಿ ಬಿಜೆಪಿಯ ಮೂಲ ಸಿದ್ದಾಂತವೆ ಸಂವಿಧಾನ ವಿರೋಧಿತನದಿಂದ ಕೂಡಿದೆ ಎನ್ನುವುದರಲ್ಲಿ ಯಾವುದೆ ಅನುಮಾನವಿಲ್ಲ. ಹೀಗಾಗಿ ಬಿಜೆಪಿ ವಿರುದ್ದ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜಲತಜ್ಞ ರಜೇಂದ್ರ ಸಿಂಗ್ ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ್ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟವರು. ಹಾಗೂ ಸಂವಿಧಾನದ ಆಶಯದಂತೆ ಮುನ್ನಡೆಯುವವರು. ಹೀಗಾಗಿ ಇವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಅಮೂಲಾಗ್ರ ಅಭಿವೃದ್ಧಿಗೆ ಜೊತೆಯಾಗಬೇಕೆಂದು ಅವರು ಹೇಳಿದರು. ಈ ವೇಳೆ ಗುರಣ್ಣ ಬಳಗನೂರು, ಜೆ.ಕೆ.ಜಮಾದಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News