ಮಧು ಬಂಗಾರಪ್ಪ ಫಾರಿನ್ ಅಭ್ಯರ್ಥಿ: ಕುಮಾರ ಬಂಗಾರಪ್ಪ

Update: 2019-04-21 16:13 GMT

ಶಿವಮೊಗ್ಗ, ಏ. 21: ಚುನಾವಣೆ ಬಂದಾಗ ಫಾರಿನ್‍ ನಲ್ಲಿದ್ದವರನ್ನು ಕರೆತಂದು ಅಭ್ಯರ್ಥಿ ಮಾಡಿ ಬೊಬ್ಬೆ ಹೊಡೆಯುವ ನಿಮಗೆ ಶಿವಮೊಗ್ಗ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೈತ್ರಿಕೂಟ ನಾಯಕರ ವಿರುದ್ಧ ಕುಮಾರ ಬಂಗಾರಪ್ಪ ಟೀಕಾಪ್ರಹಾರ ನಡೆಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಅತಿವೃಷ್ಠಿ-ಅನಾವೃಷ್ಠಿಯಾದಾಗ, ಸೊರಬಕ್ಕೆ ಬನ್ನಿ ಎಂದರೆ ಮುಖ್ಯಮಂತ್ರಿ ಬರಲಿಲ್ಲ. ಫಾರಿನ್ ಅಭ್ಯರ್ಥಿ ಪರ ಪ್ರಚಾರಕ್ಕೆ ವಾರಾನುಗಟ್ಟಲೆ ಕ್ಷೇತ್ರದಲ್ಲಿ ಠಿಕಾಣಿ ಹೂಡುತ್ತಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಸಮಸ್ಯೆಗಳಿದ್ದ ಸಮಯದಲ್ಲಿ ಶಿವಮೊಗ್ಗಕ್ಕೆ ಮುಖ್ಯಮಂತ್ರಿಗಳು ಬರಲಿಲ್ಲ. ಇಲ್ಲಿನ ನಾಗರಿಕರ ಅಹವಾಲು ಆಲಿಸಲಿಲ್ಲ. ಆದರೆ ಚುನಾವಣೆ ಬಂದಾಗ ಮಾತ್ರ ಅವರ ಇಡೀ ತಂಡವೇ, ಇಲ್ಲಿ ಠಿಕಾಣಿ ಹೂಡುತ್ತದೆ. ಇವರು ಜಿಲ್ಲೆಗೆ ಬರುವುದು ಕೇವಲ ಚುನಾವಣೆಗಾಗಿ ಮಾತ್ರವಾಗಿದೆ ಎಂದರು.

ಮೈತ್ರಿ ಅಭ್ಯರ್ಥಿಯು ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ನಾನು ಪಾದಯಾತ್ರೆ ಮಾಡಿದ್ದರಿಂದಲೇ ನೀರು ಬಂದಿದೆ ಎಂದು ಹೇಳುತ್ತಿದ್ದಾರೆ. ಸೊರಬದಲ್ಲಿ ರಸ್ತೆ ಮಾಡಿಸಿದೆ, ಚರಂಡಿ ಮಾಡಿಸಿದೆ ಎಂದೆಲ್ಲ ಸುಳ್ಳು ಕರಪತ್ರ ಮುದ್ರಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕಳೆದ 7 ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ದಾಖಲೆಗಳು ಇವೆ. ಆದರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಪುಂಖಾನುಪುಂಕವಾಗಿ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಇದಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿಯೂ ಧ್ವನಿಗೂಡಿಸಿದ್ದಾರೆ ಎಂದು ದೂರಿದರು.

ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ನಮ್ಮ ಮನೆಗೆ ಬಂದಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರ್ ಕೂಡ ಹೇಳಿದ್ದಾರೆ. ಸೊರಬ ಮತ್ತು ಶಿಕಾರಿಪುರ ಕ್ಷೇತ್ರಗಳಲ್ಲಿ ನೀರಾವರಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದರು. ಅದರಂತೆ ರಾಜ್ಯ ಬಜೆಟ್‍ನಲ್ಲಿ ಹಣ ಬಿಡುಗಡೆಗೊಳಿಸಲಾಗಿತ್ತು ಎಂದು ಶಿವಕುಮಾರ್ ಹೇಳಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಕುಮಾರ ಬಂಗಾರಪ್ಪ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News