ನನ್ನ ಪರವಾಗಿ ನಿಂತವರಿಗೆ ಕಿರುಕುಳ ನೀಡಲಾಗುತ್ತಿದೆ: ಸುಮಲತಾ ಆರೋಪ

Update: 2019-04-21 16:29 GMT

ಮಂಡ್ಯ, ಎ.21: ಚುನಾವಣೆ ಮುಗಿದಿದೆ. ಆದರೆ, ನನ್ನ ಪರವಾಗಿ ನಿಂತವರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಮಾಹಿತಿ ಬಂದಿದೆ. ಇಂತಹ ಬೆಳವಣಿಗೆಯನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಮಂಡ್ಯ ಲೋಕಸಭೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಆರೋಪಿಸಿದ್ದಾರೆ.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಟಾರ್ಗೆಟ್ ಅನ್ನು ಅಧಿಕಾರಸ್ಥರು ಹಾಗೂ ಯಾವುದೇ ಪಕ್ಷದ ಕಾರ್ಯಕರ್ತರು ಮಾಡಬಾರದು. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.

ನನ್ನನ್ನು ಬೆಂಬಲಿಸಿದ ಚಿತ್ರನಟರು ಪಶ್ಚಾತ್ತಾಪ ಪಡಬೇಕಾಗುತ್ತದೆ. ಪ್ರಾಯಶ್ಚಿತ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರ ಅರ್ಥ ಬೆದರಿಕೆಯೆ ಅಥವಾ ಅಲ್ಲವೇ ಎಂಬುದನ್ನು ತಿಳಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಾಕೀತು ಮಾಡಿದರು.

ರಾಜಕಾರಣ ಎಂದರೆ ಇವತ್ತು ಜನರಿಗೆ ಬೇರೆಯದೇ ಅಭಿಪ್ರಾಯವಿರುವುದು ವಿಪರ್ಯಾಸ. ಇದು ಬೇಸರದ ವಿಷಯ. ಈ ಚುನಾವಣೆಯಲ್ಲಿ ಎದುರು ಪಕ್ಷದವರು ನಕಾರಾತ್ಮಕ ವಿಷಯ ಮೇಲೆ ಮಾಡಿಕೊಂಡು ಬರುವು ಅಗತ್ಯ ಇರಲಿಲ್ಲ. ಆದರೂ ಜನರಿಗೆ ಯಾರ ಸ್ವಭಾವ ಹೇಗಿದೆ ಎಂಬುದು ಗೊತ್ತಾಗಿದೆ ಎಂದು ಅವರು ತಿರುಗೇಟು ನೀಡಿದರು.

ಈ ಚುನಾವಣೆಯಲ್ಲಿ ನಾನೊಬ್ಬಳೇ ಬ್ಯಾಟ್ಸ್ ಮನ್ ಆಗಿದ್ದೆ. ಆದರೆ, ಇಪ್ಪತ್ತು ಜನ ಪೀಲ್ಡರ್ಸ್ ಇದ್ದರು. ನಮ್ಮಲ್ಲಿ ಇರುವ ಆತ್ಮವಿಶ್ವಾಸದಿಂದ ಎದುರಿಸುವುದು ಕಷ್ಟವಾಗಲಿಲ್ಲ. ಜನರ ಬೆಂಬಲ ನೋಡಿ ಧೈರ್ಯ ತೆಗೆದುಕೊಂಡೆ. ಇದು ನನಗೇ ಒಂದು ಪಾಠವಾಯಿತು ಎಂದು ಅವರು ಹೇಳಿದರು.

ನಾವು ಸರ್ಜಿಕಲ್ ಸ್ಟ್ರೈಕ್ ಮಾಡಲ್ಲ, ಏನಿದ್ದರೂ ಸಿಕ್ಸರ್ ಹೊಡೀಬೇಕು. ಮಹಿಳೆಯರು ಬೆಂಬಲಿಸಿದ್ದಾರೆಂಬ ವಿಶ್ವಾಸವಿದೆ. ಮಂಡ್ಯದ ಜನರಲ್ಲಿ ಸ್ವಾಭಿಮಾನವಿದೆ. ಹಣಕ್ಕೆ ಮರುಳಾಗಿಲ್ಲ. ಮೇ 23ವರೆಗೂ ನೋಡುತ್ತೇನೆ. ಎಲ್ಲರೂ ನನಗೇ ಓಟು ಹಾಕಿಬಿಟ್ಟಿದ್ದಾರೆಂದು ಹೇಳುವುದಿಲ್ಲ ಎಂದು ಸುಮಲತಾ ಹೇಳಿದರು.

ರಾಜಕೀಯವಾಗಿ ನಾನು ಪ್ಲಾನ್ ಮಾಡಿಕೊಂಡಿಲ್ಲ. ನಿಜ ಹೇಳಬೇಕೆಂದರೆ ನಾನು ತೆಗೆದುಕೊಂಡಿರುವುದು ರಾಜಕೀಯದ ಸ್ಟೆಪ್ ಅಲ್ಲ. ಜನಾಭಿಪ್ರಾಯದ ಮೇಲೆ ನಿರ್ಧಾರ ಮಾಡಿ ಚುನಾವಣೆಗೆ ಬಂದೆ. ಮುಂದೆಯೂ ಅವರ ಅಭಿಪ್ರಾಯದಂತೆಯೇ ತೀರ್ಮಾನ ನಡೆದುಕೊಳ್ಳುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಮೊದಲ ದಿನದಿಂದ ಕೊನೆವರೆಗೂ ಜನರ ಪ್ರತಿಕ್ರಿಯೆ ಉತ್ತಮವಾಗಿಯೇ ಇತ್ತು. ಅಪಪ್ರಚಾರ ಮಾಡಿಕೊಂಡು ಬಂದರೂ ಬದಲಾಗಲಿಲ್ಲ. ರಾಜಕಾರಣಿಗಳು ಹಣ ಹಂಚುವುದನ್ನು ನೋಡುತ್ತೇವೆ. ಆದರೆ, ಜನರೇ ಕೊಡುವುದು ಮರೆಯಲಾರದ ವಿಷಯ. ತರಕಾರಿ ಮಾರುವವರೂ ಸೇರಿದಂತೆ ಅನೇಕ ಬಡವರು ಹಣ ತಂದುಕೊಟ್ಟರು. ಹೊರ ಜಿಲ್ಲೆಗಳಿಂದ ಬಂದು ಪ್ರಚಾರ ಮಾಡಿದರು. ಇದು ಮರೆಯಲಾರದ ವಿಷಯ ಎಂದರು.

ನನಗೆ ಮಂಡ್ಯವೇ ಸಿಂಗಾಪೂರ್. ಈಗ ಸಿಂಗಾಪೂರ್ ನಲ್ಲೇ ಇದ್ದೇನೆ. ನನ್ನ ವಿರುದ್ಧ ಏನೆಲ್ಲಾ ಅಪಪ್ರಚಾರ ಮಾಡಿದರೂ ಅದನ್ನು ಅವರು ಸಾಬೀತು ಮಾಡಲು ಆಗಲಿಲ್ಲ. ಅಂಬರೀಷ್ ಅಂತ್ಯಕ್ರಿಯೆ ಒಂದೇ ಅಂಶವನ್ನು ಹೇಳುತ್ತಲೇ ಬಂದರು. ಆದರೆ, ಅದು ಸುಳ್ಳು ಎಂಬುದು ಗೊತ್ತಾಯಿತು ಎಂದು ಅವರು ವ್ಯಂಗ್ಯವಾಡಿದರು.

ಜಾತಿ ರಾಜಕಾರಣವನ್ನು ತಿರಸ್ಕರಿಸುತ್ತೇನೆ. ಜನ ಅದನ್ನು ತಿರಸ್ಕರಿಸುತ್ತಾರೆಂಬ ಭಾವನೆ ಇದೆ. ಅಂಬರೀಷ್ ಟಿಪಿಕಲ್ ರಾಜಕಾರಣಿ ಆಗಿರಲಿಲ್ಲ. ಜನರ ಹೃದಯಲ್ಲಿ ರಾಜನಾಗಿದ್ದರು. ಕೆಲವರನ್ನು ನಂಬಬೇಡಿ ಎಂದು ಹೇಳುತ್ತಿದ್ದೆ. ಆದರೂ, ಎಲ್ಲರನ್ನೂ ನಂಬುತ್ತಿದ್ದರು. ಅಂಬರೀಷ್ ಕೆಲಸಗಳು ನನಗೆ ಸ್ಫೂರ್ತಿ ಆಗಿದೆ. ಮೇ 29 ಅವರ ಹುಟ್ಟುಹಬ್ಬವನ್ನು ಮಂಡ್ಯದಲ್ಲೇ ಮಾಡಲಾಗುವುದು ಎಂದು ಅವರು ಸ್ಮರಿಸಿದರು.

ಫಲಿತಾಂಶ ಏನೇ ಆಗಲಿ. ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಬೆಟ್ಟಿಂಗ್ ಕಟ್ಟಬಾರದು ಎಂದು ಮನವಿ ಮಾಡಿದ ಅವರು, ಮಂಡ್ಯ ಮತದಾರರು ಅದರಲ್ಲೂ ಮಹಿಳೆಯರು ಹೆಚ್ಚು ಮತದಾನ ದಾಖಲಿಸಿ ರಾಜ್ಯಕ್ಕೇ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಕಾಂಗ್ರೆಸ್, ರೈತಸಂಘ, ದಲಿತ ಸಂಘಟನೆ, ಪ್ರಗತಿಪರ, ಕನ್ನಡಪರ ಸಂಘಟನೆಗಳು, ಡಾ.ರವೀಂದ್ರ, ಉರುಳು ಸೇವೆ ಮಾಡಿದ ಕೆ.ಆರ್.ನಗರದ ಬೆನಕ ಪ್ರಸಾದ್, ಚಿತ್ರನಟರಾದ ದರ್ಶನ್, ಯಶ್, ದೊಡ್ಡಣ್ಣ, ರಾಕ್‍ಲೈನ್ ವೆಂಕಟೇಶ್, ಅಭಿಮಾನಿಗಳು, ಅಮಾನತು ಶಿಕ್ಷೆಗೊಳಗಾದ ಕಾಂಗ್ರೆಸ್ ಪದಾಧಿಕಾರಿಗಳಿಗೆ ಹಾಗು ಬೆಂಬಲಿಸಿದವರಿಗೆ ಸುಮಲತಾ ಕೃತಜ್ಞತೆ ಸಲ್ಲಿಸಿದರು.

ಖಂಡನೆ: ರಾಯಚೂರಿನ ವಿದ್ಯಾರ್ಥಿನಿ ಮಧು ಪತ್ತಾರ್ ನಿಗೂಢ ಸಾವನ್ನು ಉಗ್ರವಾಗಿ ಖಂಡಿಸಿದ ಸುಮಲತಾ, ಸರಕಾರ ಕೂಡಲೇ ತಪ್ಪು ಎಸಗಿದವರನ್ನು ಪತ್ತೆಮಾಡಿ ಶಿಕ್ಷೆ ಕೊಡಿಸಬೇಕು. ವಿಳಂಬ ಮಾಡದೇ ತನಿಖೆ ನಡೆಸಿ ನೊಂದ ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News