ಕಾಂಗ್ರೆಸ್-ಜೆಡಿಎಸ್ ಜಾತಿ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದೆ: ಕೆ.ಎಸ್.ಈಶ್ವರಪ್ಪ

Update: 2019-04-21 17:14 GMT

ದಾವಣಗೆರೆ,ಎ.21: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಜಾತಿಯ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದು, ಆ ಎರಡೂ ಪಕ್ಷಗಳು ಕಟ್ಟರ್ ಜಾತಿವಾದಿಗಳಾಗಿವೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. 

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿಯ ಭಾಗವಾಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತ ಒಕ್ಕಲಿಗ ಸಮುದಾಯಕ್ಕೆ ಸೇರಿಲ್ಲ. ಹೀಗಾಗಿ ಒಕ್ಕಲಿಗರು ಜೆಡಿಎಸ್ ಕೈಬಿಡಬೇಡಿ ಎಂದಿದ್ದಾರೆ. ಸಚಿವ ಝಮೀರ್ ಅಹ್ಮದ್ ಯಾವುದೇ ಕಾರಣಕ್ಕೂ ಮುಸ್ಲಿಮರು ಬಿಜೆಪಿಗೆ ವೋಟು ಹಾಕಬೇಡಿ ಎಂದಿದ್ದಾರೆ. ಹೀಗೆ ಜಾತಿವಾದ ಪ್ರತಿಪಾದಿಸುತ್ತಿರುವ ಮೈತ್ರಿ ನಾಯಕರಿಗೆ ಬಿಜೆಪಿ ಕೋಮುವಾದಿ ಪಕ್ಷ ಎಂದು ಜರೆಯಲು ಯಾವ ಮುಖವಿದೆ ಎಂದು ಪ್ರಶ್ನಿಸಿದರು.  

ಈ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯವಾದ ಪ್ರತಿಪಾದಿಸಿದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಜಾತಿವಾದದ ಮೇಲೆ ರಾಜಕಾರಣ ಮಾಡುತ್ತಿವೆ. ಹೀಗಾಗಿ ಈ ಚುನಾವಣೆಯು ರಾಷ್ಟ್ರವಾದ ಹಾಗೂ ಜಾತಿವಾದದ ನಡುವಿನ ಸಂಘರ್ಷವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಾನು ಮೂವರು ಕುರುಬರಿಗೆ ಟಿಕೆಟ್ ಕೊಡಿಸಿದ್ದೇನೆ. ಈಶ್ವರಪ್ಪ ಒಬ್ಬ ಕುರುಬರಿಗೂ ಟಿಕೆಟ್ ಕೊಡಿಸಿಲ್ಲ. ಹೀಗಾಗಿ ಅವರಿಗೆ ಮಾನ-ಮರ್ಯಾದೆ ಇದ್ದರೇ, ರಾಜಕೀಯ ಸನ್ಯಾಸತ್ವ ಪಡೆಯಲಿ ಎಂದಿದ್ದಾರೆ. ಕರ್ನಾಟಕದ ಜನತೆ ಯಾವುದೇ ಕಾರಣಕ್ಕೂ ಜಾತಿವಾದಿಗಳಿಗೆ ಬೆಂಬಲ ನೀಡಲ್ಲ. ಜಾತಿವಾದಿಗಳನ್ನು ಜನತೆ ದೂರವಿಟ್ಟು ಬಹಳ ದೂರವಾಗಿದ್ದು, ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ 20ರಿಂದ 20 ಸ್ಥಾನ ಪಡೆದು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ನೆರವಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳಿಗಾಗಿ ಏನೇನು ಮಾಡಿದ್ದಾರೆಂಬುದರ ಪಟ್ಟಿ ಕೊಡಲಿ, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದೇವೆಂಬುದರ ಪಟ್ಟಿಯನ್ನು ನಾವು ಕೊಡುತ್ತೇವೆಂದು ಸವಾಲು ಹಾಕಿದರು.

ಗೋಷ್ಠಿಯಲ್ಲಿ ಮಾಜಿ ಮುಖ್ಯಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಬಿ.ಎಂ.ಸತೀಶ್ ಕೊಳೆನಹಳ್ಳಿ, ಹೆಚ್.ಎಸ್.ಲಿಂಗರಾಜ್, ಜಿ.ಎಂ.ಸುರೇಶ್, ಎನ್.ರಾಜಶೇಖರ್, ಕೆ.ಹೇಮಂತಕುಮಾರ್, ಧನುಷ್ ರೆಡ್ಡಿ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News