ಶಾಂತಿ, ಸುವ್ಯವಸ್ಥಿತ ಮತದಾನಕ್ಕೆ ಸಕಲ ಸಿದ್ಧತೆ: ವಿಜಯಪುರ ಜಿಲ್ಲಾಧಿಕಾರಿ ಎಂ.ಕನಗವಲ್ಲಿ

Update: 2019-04-21 17:37 GMT

ವಿಜಯಪುರ,ಎ.21: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಜಿಲ್ಲಾದ್ಯಂತ 2101 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆ, ಸಿಬ್ಬಂದಿ ನಿಯೋಜನೆ ಮೊದಲಾದ ವಿಷಯಗಳ ಕುರಿತು ಸಮಗ್ರ ವಿವರಣೆ ನೀಡಿದ ಅವರು, ಕಳೆದ ಚುನಾವಣೆಯಲ್ಲಿ 1869 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ 2101 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಗಳಲ್ಲಿ 241, ದೇವರಹಿಪ್ಪರಗಿಯಲ್ಲಿ 252, ಬಸವನ ಬಾಗೇವಾಡಿಯಲ್ಲಿ 233, ಬಬಲೇಶ್ವರದಲ್ಲಿ 253, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ 272, ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ 305, ಇಂಡಿಯಲ್ಲಿ 274 ಹಾಗೂ ಸಿಂದಗಿಯಲ್ಲಿ 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು. 

ಪ್ರತಿಯೊಂದು ಮತಗಟ್ಟೆ ಕೇಂದ್ರಗಳಿಗೆ ಪೊಲೀಸ್ ಭದ್ರತೆ, ಮೂಲಭೂತ ಸೌಕರ್ಯ, ಕುಡಿಯುವ ನೀರಿನ ಸೌಕರ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಸರಣಿ ಸಭೆಗಳನ್ನು ನಡೆಸುವ ಮೂಲಕ ಚುನಾವಣಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು. 

17,95,931 ಮತದಾರರು
ಪ್ರಸ್ತುತ ವಿಜಯಪುರ ಲೋಕಸಭಾ ಮತಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ 17,95,931 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಅದರಲ್ಲಿ 9,21,258 ಪುರುಷ ಮತದಾರರು, 8,74,404 ಮಹಿಳಾ ಮತದಾರರು ಮತ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಅವಲೋಕಿಸದಾಗ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ  2,06,824 (1,05,681 ಪುರುಷ ಮತದಾರರು -1,01,109 ಮಹಿಳಾ ಮತದಾರರು), ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 2,10,868 (1,08,850ಪುರುಷ ಮತದಾರರು - 1,01,998 ಮಹಿಳಾ ಮತದಾರರು), ಬಸವನ ಬಾಗೇವಾಡಿಯಲ್ಲಿ 2,04,850 (1,05,019 ಪುರುಷ ಮತದಾರರು - 99,813 ಮಹಿಳಾ ಮತದಾರರು), ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 2,06,738 (1,05,578 ಪುರುಷ ಮತದಾರರು -1,01,148 ಮಹಿಳಾ ಮತದಾರರು), ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ 2,56,845  (1,32,635 ಪುರುಷ ಮತದಾರರು -1,24,179 ಮಹಿಳಾ ಮತದಾರರು), ಇಂಡಿಯಲ್ಲಿ 2,33,849 (1,21,199 ಪುರುಷ ಮತದಾರರು - 1,12,627 ಮಹಿಳಾ ಮತದಾರರು) ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ 2,27,114 (1,17,264 ಪುರುಷ ಮತದಾರರು -1,09,821 ) ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ ಎಂದು ಅಂಕಿ-ಅಂಶಗಳನ್ನು ವಿವರಿಸಿದರು. 

ಅದರಂತೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗಳು ಅಂಚೆಪತ್ರಗಳ ಮೂಲಕ ಮತದಾನ ಚಲಾಯಿಸುವ ಹಕ್ಕು ನೀಡಲಾಗಿದೆ. ಒಟ್ಟು 1,654 ಮತದಾರರು (1,631 ಪುರುಷ ಮತದಾರರು -23 ಮಹಿಳಾ ಮತದಾರರು) ಮತ ಚಲಾಯಿಸಲಿದ್ದಾರೆ ಎಂದರು. 

ವಿಧಾನಸಭಾ ಕ್ಷೇತ್ರವೊಂದರಲ್ಲಿ ತಲಾ ಒಂದೊಂದು ಮಾದರಿ ಮತಗಟ್ಟೆ ಕೇಂದ್ರ ಹಾಗೂ ಮಹಿಳಾ ಸಿಬ್ಬಂದಿಯನ್ನೇಗೊಳಗೊಂಡ 'ಸಖಿ' ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುದ್ದೇಬಿಹಾಳದಲ್ಲಿ ಕನಕದಾಸ ಪ್ರೌಢಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 136, ದೇವರಹಿಪ್ಪರಗಿಯ ಕನಕದಾಸ ಪ್ರೌಢಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 39, ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಬಾಲಕಿಯರ ಪ್ರವಢಶಾಲೆಯ ಮತಗಟ್ಟೆ ಸಂಖ್ಯೆ 50, ಬಬಲೇಶ್ವರದ ಸಾರ್ವಜನಿಕ ಕೇಂದ್ರ ಗ್ರಂಥಾಲಯದಲ್ಲಿರುವ ಮತಗಟ್ಟೆ 148, ವಿಜಯಪುರ ನಗರದ ವಿ.ಭ.ದರಬಾರ ಪ್ರೌಢಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 113, ನಾಗಠಾಣದ ಬಿವಿವಿಎಸ್ ಡಿಇಡಿ ಮಹಾವಿದ್ಯಾಲಯದ ಮತಗಟ್ಟೆ 251, ಇಂಡಿಯ ಅಥರ್ಗಾ ಗ್ರಾ.ಪಂ.ನಲ್ಲಿ ಮತಗಟ್ಟೆ 268, ಸಿಂದಗಿಯ ಉರ್ದು ಪ್ರೌಢಶಾಲೆಯಲ್ಲಿ ಮತಗಟ್ಟೆ 168ನ್ನು ಮಾದರಿ ಮತಗಟ್ಟೆಯಾಗಿ ಗುರುತಿಸಲಾಗಿದೆ.

ಅದರಂತೆ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ ಸಖಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುದ್ದೇಬಿಹಾಳದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ, ದೇವರಹಿಪ್ಪರಗಿಯಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರೌಢಶಾಲೆ, ಬಸವನ ಬಾಗೇವಾಡಿಯಲ್ಲಿ ಸರ್ಕಾರಿ ಉರ್ದು ಶಾಲೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ತಿಕೋಟಾದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ವಿಜಯಪುರ ನಗರದಲ್ಲಿ ವಿ.ವ. ಸಂಘದ ಪ್ರೌಢಶಾಲೆ, ನಾಗಠಾಣದಲ್ಲಿ ಹೊನ್ನುಟಗಿಯ ಹಿರಿಯ ಪ್ರಾಥಮಿಕ ಶಾಲೆ, ಇಂಡಿಯಲ್ಲಿ ಇಂಡಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಗೂ ಸಿಂದಗಿಯಲ್ಲಿ ಸಿಂದಗಿ ಪಟ್ಟಣದ ಕಾಳಿಕಾ ದೇವಿ ದೇವಾಳಯದ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ 'ಸಖಿ' ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 

ಮತಗಟ್ಟೆ ಕೇಂದ್ರಗಳಿಗೆ ಸಿಬ್ಬಂದಿ ಹಾಗೂ ಇವಿಎಂ ಮಷೀನ್‍ಗಳನ್ನು ಸಾಗಿಸಲು ಒಟ್ಟು 258 ಸಾರಿಗೆ ಬಸ್ ಸೇರಿದಂತೆ ಕ್ರೂಸರ್, ಟೆಂಪೋ ಮೊದಲಾದ 408 ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ ಎಂದರು. 

2,477 ಬ್ಯಾಲೆಟ್ ಯೂನಿಟ್, 2,447 ಕಂಟ್ರೋಲ್ ಯೂನಿಟ್  
ಪ್ರಸ್ತುತ ಚುನಾವಣೆಗೆ 2,477 ಬ್ಯಾಲೆಟ್ ಯೂನಿಟ್ ಹಾಗೂ 2,447 ಕಂಟ್ರೋಲ್ ಯೂನಿಟ್ ಒಳಗೊಂಡ ಇವಿಎಂ ಮಷಿನ್‍ಗಳನ್ನು ಚುನಾವಣೆಗೆ ಬಳಸಲಾಗಿದೆ. ಹೆಚ್ಚುವರಿಯಾಗಿಯೂ ಇವಿಎಂಗಳನ್ನು ಕಾಯ್ದಿರಿಸಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 284, ದೇವರಹಿಪ್ಪರಗಿಯಲ್ಲಿ 299, ಬಸವನ ಬಾಗೇವಾಡಿಯಲ್ಲಿ 275, ಬಬಲೇಶ್ವರದಲ್ಲಿ 296, ವಿಜಯಪುರ ನಗರದಲ್ಲಿ 324, ನಾಗಠಾಣದಲ್ಲಿ 361, ಇಂಡಿ 322 ಹಾಗೂ ಸಿಂದಗಿಯಲ್ಲಿ 316 ಬ್ಯಾಲೆಟ್ ಯೂನಿಟ್‍ಗಳನ್ನು ಹಂಚಿಕೆ ಮಾಡಲಾಗಿದೆ.

ಮುದ್ದೇಬಿಹಾಳದಲ್ಲಿ 285, ದೇವರಹಿಪ್ಪರಗಿಯಲ್ಲಿ 293, ಬಸವನ ಬಾಗೇವಾಡಿಯಲ್ಲಿ 271, ಬಬಲೇಶ್ವರ 294, ವಿಜಯಪುರ ನಗರ 317, ನಾಗಠಾಣದಲ್ಲಿ 352, ಇಂಡಿಯಲ್ಲಿ 324, ಸಿಂದಗಿ 311 ಕಂಟ್ರೋಲ್ ಯೂನಿಟ್‍ಗಳನ್ನು ಹಂಚಿಕೆ ಮಾಡಲಾಗಿದೆ.

2,343 ವಿವಿಫ್ಯಾಟ್‍ಗಳನ್ನು ಹಂಚಿಕೆ ಮಾಡಲಾಗಿದೆ. ಮುದ್ದೇಬಿಹಾಳದಲ್ಲಿ 281, ದೇವರಹಿಪ್ಪರಗಿಯಲ್ಲಿ 286, ಬಸವನ ಬಾಗೇವಾಡಿಯಲ್ಲಿ 246, ಬಬಲೇಶ್ವರ 273, ವಿಜಯಪುರ ನಗರ 302, ನಾಗಠಾಣ 346, ಇಂಡಿ 294, ಸಿಂದಗಿ 315 ವಿವಿಫ್ಯಾಟ್‍ಗಳನ್ನು ಹಂಚಿಕೆ ಮಾಡಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News