ಯಶ್, ದರ್ಶನ್ ಬಗ್ಗೆ ಸಿಎಂ ಹೇಳಿಕೆ ಅವರ ಹತಾಶತನವನ್ನು ತೋರಿಸುತ್ತಿದೆ: ವಿಪ ಸದಸ್ಯ ಅರುಣ ಶಹಾಪೂರ

Update: 2019-04-21 17:41 GMT

ವಿಜಯಪುರ,ಎ.21: ಸಂವಿಧಾನ ಬದ್ಧವಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ಪ್ರಚಾರ ನಡೆಸಿದ ಯಶ್-ದರ್ಶನ್ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿರುವುದು ಅವರ ಹತಾಶತನವನ್ನು ಎತ್ತಿ ತೋರಿಸುತ್ತಿದೆ. ಕೂಡಲೇ ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು. 

ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದ್ಧವಾದ ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳು ದರ್ಶನ್, ಯಶ್ ಅವರನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಇದು ಅವರ ಹತಾಶತನದಿಂದ ಕೂಡಿದ ಹೇಳಿಕೆಯಾಗಿದೆ ಎಂದರು. 

ಇದು ಒಂದು ರೀತಿ ಹಾಸನ, ಮಂಡ್ಯ ಹಾಗೂ ತುಮಕೂರಿಗೆ ಸೀಮಿತವಾಗಿರುವ ಎಚ್‍ಎಂಟಿ ಸರ್ಕಾರ. ಹುಬ್ಬಳ್ಳಿಯಲ್ಲಿ ಮನೆ ಮಾಡಿ ಅಲ್ಲೇ ನೆಲೆಸುತ್ತೇನೆ ಎಂದು ವಾಗ್ದಾನ ಮಾಡಿದ್ದ ಕುಮಾರಸ್ವಾಮಿ ಅವರು ನಂತರ ಯಾರಿಗೂ ಹೇಳದೇ ಕೇಳದೇ ಮನೆ ಖಾಲಿ ಮಾಡಿ ಹೊರಟು ಹೋದರು. ಇಡೀ ಉತ್ತರ ಕರ್ನಾಟಕ ಜನತೆ ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಉತ್ತರ ಕರ್ನಾಟಕ ಜನತೆ ಅವರಿಗೆ ಒಪ್ಪುವುದಿಲ್ಲ. ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಕುಮಾರಸ್ವಾಮಿ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ದೇಶದ ರಕ್ಷಣೆಯ ಬಗ್ಗೆ ನಿಮಗೆ ಎಷ್ಟು ಬದ್ಧತೆ ಇದೆಯಾ ಎಂದು ಪ್ರಶ್ನಿಸಿದರು.  

ಇನ್ನು, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಮೊನ್ನೆ ಹೇಳಿಕೆ ನೀಡಿ, ಅವರನ್ನು ವಿರೋಧಿಸುವವರೆಲ್ಲ ಸ್ವರ್ಗ ಸೇರಿದ್ದಾರೆ, ನನ್ನೊಂದಿಗೆ ದೈವೀಶಕ್ತಿ ಇದೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಬಾಲಿಶತನದ ಹೇಳಿಕೆ. ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ ದೇವೆಗೌಡರಿಗೆ ಈ ಹೇಳಿಕೆ ಶೋಭೆ ತರದು ಎಂದರು. 

ಐಟಿಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡಿಲ್ಲ. ಈ ಹಿಂದೆ ಇದ್ದ ಯುಪಿಎ ಸರ್ಕಾರ ಈ ಸಂಸ್ಥೆಗಳನ್ನು ದುರುಪಯೋಗಪಡಿಸಿ ಕೊಂಡಿರಬಹುದು. ಆದರೆ ಬಿಜೆಪಿ ಸರ್ಕಾರ ಈ ಯಾವುದೇ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ ಎಂದರು. ಕಾಂಗ್ರೆಸ್ಸಿಗರಿಗೆ ಹತಾಶೆಯಾಗಿದೆ. ಆ ಕಾರಣಕ್ಕಾಗಿಯೇ ಈ ರೀತಿ ಆಪಾದನೆ ಮಾಡುತ್ತಿದ್ದಾರೆ. ಇದು ಹತಾಶತನದಿಂದ ಕೂಡಿದ ಹೇಳಿಕೆ ಎಂದು ಶಹಾಪೂರ ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡರಾದ ಭೀಮಾಶಂಕರ್ ಹದನೂರ, ಪಾಪುಸಿಂಗ್ ರಜಪೂತ, ರಾಕೇಶ ಕುಲಕರ್ಣಿ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News