ಹೇಮಂತ್ ಕರ್ಕರೆ ತಂಡದ ಹತ್ಯೆ: ಮಗದೊಂದು ತನಿಖೆ ಅಗತ್ಯವೇ?

Update: 2019-04-22 05:19 GMT

26 ನವೆಂಬರ್ 2008ರಂದು ನಡೆದ ಮುಂಬೈ ದಾಳಿಯ ಗುರಿ ಅಮಾಯಕರ ಹತ್ಯೆಯಷ್ಟೇ ಆಗಿತ್ತೆ? ಎನ್ನುವ ಪ್ರಶ್ನೆಗೆ ಮತ್ತೆ ರೆಕ್ಕೆ ಮೂಡಿದೆ. ‘ನನ್ನ ಶಾಪದಿಂದ ಕರ್ಕರೆ ಸಾವಿಗೀಡಾಗಿದ್ದಾರೆ’, ‘ಕರ್ಕರೆ ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿದ್ದರು’ ಎಂಬಿತ್ಯಾದಿ ಸಾಲು ಸಾಲು ಹೇಳಿಕೆಗಳು ಸಂಘಪರಿವಾರ ಮತ್ತು ಬಿಜೆಪಿಯಿಂದ ಹೊರಬೀಳುತ್ತಿದ್ದು, ಭಯೋತ್ಪಾದಕರಿಂದ ಹುತಾತ್ಮರಾಗಿದ್ದ ಕರ್ಕರೆಯ ಸಾವನ್ನು ಗುಟ್ಟಾಗಿ ಯಾರೆಲ್ಲ ಸಂಭ್ರಮಿಸಿದ್ದರು ಎನ್ನುವುದು ಇದೀಗ ಬಹಿರಂಗವಾಗುತ್ತಿದೆ. ಸಾಧಾರಣವಾಗಿ ಬಹುತೇಕ ಭಯೋತ್ಪಾದಕರ ದಾಳಿ ಅಮಾಯಕರನ್ನು ಗುರಿಯಾಗಿಸಿಕೊಂಡಿರುತ್ತದೆ. ಆದರೆ ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ಗುರಿ ಅಮಾಯಕ ಜನರಷ್ಟೇ ಆಗಿರಲಿಲ್ಲ. ಆ ದಾಳಿಯಲ್ಲಿ ಭಯೋತ್ಪಾದಕರ ಗುಂಡಿಗೆ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ಸಲಾಸ್ಕರ್‌ರಂತಹ ಎಟಿಎಸ್‌ನ ಹಿರಿಯ ಅಧಿಕಾರಿಗಳೂ ಮೃತಪಟ್ಟರು. ಈ ನಿರ್ದಿಷ್ಟ ತಂಡದ ಬಹುತೇಕ ಅಧಿಕಾರಿಗಳು ಅಂದು ಕೊಲೆಯಾಗುವ ಮೂಲಕ, ದೇಶದೊಳಗೆ ಹೆಡೆಯೆತ್ತಿದ್ದ ‘ಕೇಸರಿ ಭಯೋತ್ಪಾದನೆ’ಯ ತನಿಖೆಗೆ ಬಹುದೊಡ್ಡ ಅಡ್ಡಿಯಾಯಿತು. ಪಾಕಿಸ್ತಾನದ ಉಗ್ರರ ದಾಳಿಗೆ ಅವರು ಬಲಿಯಾದರು ಎಂದು ನಾವೆಲ್ಲ ಈವರೆಗೆ ನಂಬಿಕೊಂಡು ಬಂದಿದ್ದೇವೆ. ತನಿಖೆಯೂ ಅದನ್ನೇ ಹೇಳುತ್ತಿದೆ. ಆದರೆ ಮಾಲೆಗಾಂವ್ ಸ್ಫೋಟ ಆರೋಪಿಯ ಮಾತುಗಳು ವ್ಯತಿರಿಕ್ತವಾದ ಸತ್ಯವೊಂದನ್ನು ಹೇಳುತ್ತಿವೆ.

ಕರ್ಕರೆ ಮತ್ತು ಅವರ ತಂಡದ ಸಾವು ಪಾಕಿಸ್ತಾನದ ಭಯೋತ್ಪಾದಕರ ಅಗತ್ಯವಲ್ಲ, ಈ ದೇಶದೊಳಗಿನ ಕೇಸರಿ ಮುಖವಾಡದೊಳಗಿರುವ ಭಯೋತ್ಪಾದಕರ ಅಗತ್ಯವಾಗಿತ್ತು ಎನ್ನುವುದು ಪ್ರಜ್ಞಾ ಠಾಕೂರ್ ಮತ್ತು ಆಕೆಯ ಸಮರ್ಥಕರಿಂದ ಬೆಳಕಿಗೆ ಬಂದಿದೆ. ಮುಂಬೈ ದಾಳಿ ನಡೆದಾಗ ಅಧಿಕಾರದಲ್ಲಿದ್ದುದು ಯುಪಿಎ ಸರಕಾರ. ಈ ದಾಳಿ ನಡೆದ ಒಂದು ತಿಂಗಳ ಬಳಿಕ ಅಂದಿನ ಕೇಂದ್ರ ಸಚಿವ ಎ. ಆರ್. ಅಂತುಳೆ ಅವರು ‘ಕರ್ಕರೆಯ ಹತ್ಯೆ’ಯ ಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದರು. ‘ಈ ದಾಳಿ ಭಯೋತ್ಪಾದಕರಿಂದಲೂ ಮತ್ತು ಇನ್ನಿತರರ ಪಾಲುದಾರಿಕೆಯಿಂದಲೂ ನಡೆದಿರಬಹುದು’ ಎನ್ನುವ ಶಂಕೆಯನ್ನು ವ್ಯಕ್ತಪಡಿಸಿದ್ದೇ ಸಂಘಪರಿವಾರದ ಎಲ್ಲ ಮುಖಂಡರು ಅವರ ಮೈಮೇಲೆ ಬಿದ್ದರು. ಅಂತುಳೆಯವರು ‘ಕರ್ಕರೆ ಮತ್ತು ಅವರ ತಂಡದ ಹತ್ಯೆಯನ್ನು ಪ್ರತ್ಯೇಕವಾಗಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದರು. ಕರ್ಕರೆ ಮತ್ತು ಅವರ ತಂಡ ಈ ದೇಶದ ಆಸ್ತಿ. ಈ ದೇಶದೊಳಗೆ ಸಾಂಸ್ಕೃತಿಕ ವೇಷ ಧರಿಸಿ, ದೇಶದ ವಿರುದ್ಧ ದಾಳಿ ನಡೆಸುತ್ತಿದ್ದ ‘ಕೇಸರಿ ಭಯೋತ್ಪಾದಕರ’ ಅಸ್ತಿತ್ವವನ್ನು ಮೊತ್ತ ಮೊದಲಬಾರಿಗೆ ಕರ್ಕರೆ ಬಹಿರಂಗ ಪಡಿಸಿದ್ದರು. ಆವರೆಗೆ ಸಂಜೋತಾ ಎಕ್ಸ್‌ಪ್ರೆಸ್, ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್‌ಗಳಲ್ಲಿ ನಡೆದ ಸ್ಫೋಟವನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ತಲೆಗೆ ಕಟ್ಟಿ, ದೇಶದೊಳಗಿರುವ ಹಲವು ಅಮಾಯಕ ಮುಸ್ಲಿಮ್ ತರುಣರನ್ನು ಬಂಧಿಸಲಾಗಿತ್ತು.

ದೇಶವನ್ನು ವಿಚ್ಛಿದ್ರಗೊಳಿಸಿ, ಅಮಾಯಕ ಮುಸ್ಲಿಮರನ್ನು ಕೊಂದು, ಅದನ್ನು ಇನ್ನಿತರ ಅಮಾಯಕ ಮುಸ್ಲಿಮರ ತಲೆಗೆ ಕಟ್ಟಿ ಅವರ ಬದುಕನ್ನು ನಾಶ ಮಾಡುವ ನೀಚ ಉದ್ದೇಶವನ್ನು ಈ ಕೇಸರಿ ಉಗ್ರರು ಹೊಂದಿದ್ದರು. ಕರ್ಕರೆ ತಂಡದ ತನಿಖೆ ಈ ದೇಶದಲ್ಲಿ ಭವಿಷ್ಯದಲ್ಲಿ ನಡೆಯಬಹುದಾದ ಬಹುದೊಡ್ಡ ವಿಪತ್ತನ್ನು ತಡೆಯಿತು. ಈ ಕೇಸರಿ ಭಯೋತ್ಪಾದನೆಯ ಹುತ್ತವನ್ನು ಅಗೆಯುತ್ತಾ ಹೋದಂತೆ ಅದು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್‌ವರೆಗೆ ತಲುಪಿರುವುದು ಗಮನಾರ್ಹ. ಮುಂಬೈ ದಾಳಿ ನಡೆದ ಸ್ಥಳವೇ ಬೇರೆ, ಕರ್ಕರೆ ತಂಡ ಹತ್ಯೆಯಾದ ಸ್ಥಳವೇ ಬೇರೆ. ಬುಲೆಟ್ ಪ್ರೂಫ್‌ಗಳಿದ್ದರೂ ಇವರೆಲ್ಲರೂ ಹೇಗೆ ಅಷ್ಟು ಸುಲಭವಾಗಿ ಭಯೋತ್ಪಾದಕರ ಕೈಯಲ್ಲಿ ಹತ್ಯೆಯಾದರು ಎನ್ನುವುದು ಒಗಟಾಗಿಯೇ ಇದೆ. ಈ ಹುತಾತ್ಮರ ಬಲಿದಾನ ಅರ್ಥಪೂರ್ಣವಾಗಬೇಕಾದರೆ ಅವರ ಸಾವಿನ ಸತ್ಯಾಸತ್ಯತೆ ಹೊರಬರಲೇ ಬೇಕಾಗಿತ್ತು. ಈ ಕಾರಣದಿಂದ ಅಂದಿನ ಕೇಂದ್ರ ಸಚಿವ ಅಂತುಳೆ, ಪ್ರತ್ಯೇಕ ತನಿಖೆಯೊಂದರ ಅಗತ್ಯವನ್ನು ಹೇಳಿದ್ದರು. ಆದರೆ ಈ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಅಧಿಕಾರಿಗಳ ಹತ್ಯೆಯ ತನಿಖೆಗೆ ಒತ್ತಾಯಿಸಿದ ಒಂದೇ ಕಾರಣಕ್ಕಾಗಿ ಅವರು ತಮ್ಮ ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು. ಅದಾಗಲೇ ಮುಂಬೈ ದಾಳಿಯ ಸರ್ವ ಹೊಣೆಯನ್ನು ಭಾರತ ಪಾಕಿಸ್ತಾನದ ಮೇಲೆ ಹಾಕಿರುವುದರಿಂದ, ಅಂತುಳೆಯ ಹೇಳಿಕೆ ವಿವಾದಕ್ಕೊಳಗಾಯಿತು. ಇದೀಗ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್, ಬಿಜೆಪಿಯ ನಾಯಕಿ ಮಧು ಕೀಶ್ವರ್ ಮೊದಲಾದವರ ಹೇಳಿಕೆ ಕರ್ಕರೆ ಸಾವಿನ ಕುರಿತಂತೆ ಮತ್ತೆ ಅನುಮಾನಗಳನ್ನು ಹುಟ್ಟಿಸಿದೆ.

ಕೇಸರಿ ಭಯೋತ್ಪಾದನೆಯ ನೆಲೆಗಳನ್ನು ಪತ್ತೆ ಹಚ್ಚಿದ ಬಳಿಕ ಕರ್ಕರೆಯವರಿಗೆ ಪದೇ ಪದೇ ಬೆದರಿಕೆಯ ಕರೆಗಳು ಬರುತ್ತಿರುವುದನ್ನು ಅವರು ಅದಾಗಲೇ ತಮ್ಮ ಆತ್ಮೀಯರ ಜೊತೆಗೆ ಹಂಚಿಕೊಂಡಿದ್ದರು. ಸ್ವತಃ ಪ್ರಜ್ಞಾ ಸಿಂಗ್ ಅವರೇ ಕರ್ಕರೆಗೆ ‘ನೀನು ನಾಶವಾಗುತ್ತೀಯ’ ಎಂದು ಬೆದರಿಕೆಯೊಡ್ಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ‘ನನ್ನ ಶಾಪದಿಂದ ಕರ್ಕರೆ ಸತ್ತರು’ ಎಂಬ ಹೇಳಿಕೆಯನ್ನು ಪ್ರಜ್ಞಾ ಠಾಕೂರ್ ಹೇಳಿದ್ದಾರೆ. ಮಧು ಕೀಶ್ವರ್ ಅವರು ತಮ್ಮ ಹೇಳಿಕೆಯೊಂದರಲ್ಲಿ ‘‘ಕರ್ಕರೆ ಪಾಕಿಸ್ತಾನಕ್ಕಾಗಿ ಕೆಲಸ ಮಾಡುತ್ತಿದ್ದರು’’ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನಕ್ಕಾಗಿ ಅವರು ಕೆಲಸ ಮಾಡಿದ್ದರಾದರೆ, ಅವರನ್ನೇಕೆ ಪಾಕಿಸ್ತಾನದ ಭಯೋತ್ಪಾದಕರು ಕೊಂದರು? ಅಥವಾ ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಮಧು ಕೀಶ್ವರ್‌ರ ಜನರೇ ಕರ್ಕರೆಯವರನ್ನು ಕೊಂದು ಹಾಕಿದರೇ? ಇದಕ್ಕೆ ಸ್ಪಷ್ಟನೆಯನ್ನು ಸ್ವತಃ ಮಧು ಕಿಶ್ವರ್ ಅವರೇ ನೀಡಬೇಕು. ನನ್ನ ಶಾಪದಿಂದ ಕರ್ಕರೆ ಹತ್ಯೆಯಾದರು ಎನ್ನುವ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆಯಿಂದ ಒಂದಂತೂ ಸ್ಪಷ್ಟವಾಗುತ್ತದೆ.

ಪ್ರಜ್ಞಾ ಸಿಂಗ್ ತಂಡಕ್ಕೆ ಕರ್ಕರೆ ನೇತೃತ್ವದ ಎಟಿಎಸ್ ತಂಡ ಸಂಪೂರ್ಣ ಹತ್ಯೆಯಾಗುವ ಅಗತ್ಯವಂತೂ ಇತ್ತು. ಕರ್ಕರೆ ತಂಡ ಹತ್ಯೆಯಾಗದೇ ಇದ್ದಿದ್ದರೆ ಇಂದು ಪ್ರಜ್ಞಾ ಸಿಂಗ್, ಅಸೀಮಾನಂದರಂತಹ ಆರೋಪಿಗಳು ಇಷ್ಟು ಸುಲಭವಾಗಿ ನ್ಯಾಯ ವ್ಯವಸ್ಥೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮೋದಿ ನೇತೃತ್ವದ ಸರಕಾರ ಎನ್‌ಐಎಗೆ ಪ್ರಕರಣವನ್ನು ಹಸ್ತಾಂತರಿಸಿದ ಉದ್ದೇಶ ಏನು ಎನ್ನುವುದು ಎನ್‌ಐಎ ಮಾಜಿ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಹೇಳಿಕೆಯಿಂದ ಬಹಿರಂಗವಾಗಿದೆ. ಪ್ರಜ್ಞಾ, ಪುರೋಹಿತ್, ಅಸೀಮಾನಂದರಂತಹ ಶಂಕಿತ ಉಗ್ರರನ್ನು ರಕ್ಷಿಸುವಲ್ಲಿ ಎನ್‌ಐಎ ಪಾತ್ರ ಏನು ಎನ್ನುವುದು ಮಾಧ್ಯಮಗಳಲ್ಲಿ ಇದೀಗ ಚರ್ಚೆಯ ವಿಷಯವಾಗಿದೆ. ಈ ದೇಶಕ್ಕಾಗಿ ಪ್ರಾಣ ಕೊಟ್ಟ ಹುತಾತ್ಮ ಅಧಿಕಾರಿಗಳ ಬಲಿದಾನವನ್ನು ಬಹಿರಂಗವಾಗಿ ಅಗೌರವಿಸಿ, ಅವರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿ, ಅವರ ಸಾವನ್ನು ಸಂಭ್ರಮಿಸುವ ಈ ಪ್ರಕ್ರಿಯೆ ದೇಶದ ಪಾಲಿಗೆ ಅತ್ಯಂತ ಆಘಾತಕಾರಿಯಾಗಿದೆ. ಭಯೋತ್ಪಾದನೆಯ ವಿರುದ್ಧ ಪ್ರಾಣವನ್ನು ಒತ್ತೆಯಿಟ್ಟು ಹೋರಾಡುವ ಅಧಿಕಾರಿಗಳು, ಯೋಧರ ನೈತಿಕ ಶಕ್ತಿಯ ಮೇಲೆ ನಡೆಸಿದ ದಾಳಿ ಇದಾಗಿದೆ. ದೇಶ ಇದನ್ನು ಒಂದಾಗಿ ಖಂಡಿಸಬೇಕಾಗಿದೆ ಮಾತ್ರವಲ್ಲ, ಕೇಸರಿ ಉಗ್ರರ ಸಂಚುಗಳನ್ನು ತನಿಖೆಯಿಂದ ಬಹಿರಂಗಪಡಿಸಿದ ಕರ್ಕರೆ ತಂಡದ ಹತ್ಯೆಯನ್ನು ಪ್ರತ್ಯೇಕವಾಗಿ ತನಿಖೆ ಮಾಡಲು ಒತ್ತಾಯಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News