ಶ್ರೀಲಂಕಾ ಬಾಂಬ್ ಸ್ಫೋಟ: ಐವರು ಜೆಡಿಎಸ್ ಕಾರ್ಯಕರ್ತರು ಮೃತಪಟ್ಟಿರುವುದು ದೃಢ

Update: 2019-04-22 13:07 GMT

ಬೆಂಗಳೂರು,ಎ. 22: ಶ್ರೀಲಂಕಾದ ಕೊಲಂಬೋದಲ್ಲಿ ನಾಪತ್ತೆಯಾಗಿದ್ದ ಏಳು ಮಂದಿ ಜೆಡಿಎಸ್ ಕಾರ್ಯಕರ್ತರ ಪೈಕಿ ಐವರು ಮೃತಪಟ್ಟಿದ್ದಾರೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಈ ಸಂಬಂಧ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸಿಎಂ ಕುಮಾರಸ್ವಾಮಿ, ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕೊಲಂಬೋ ಸರಣಿ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಕಾಣೆಯಾಗಿದ್ದ, ರಾಜ್ಯದ ಏಳು ಜನರಲ್ಲಿ ಐದು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದು ಅತ್ಯಂತ ದುಃಖಕರ ಸಂಗತಿ ಎಂದು ತಿಳಿಸಿದ್ದಾರೆ.

ಮೃತರನ್ನು ಲಕ್ಷ್ಮಣ ಗೌಡ, ರಮೇಶ್, ಕೆ.ಎಂ.ಲಕ್ಷ್ಮೀನಾರಾಯಣ, ಎಂ.ರಂಗಪ್ಪ ಹಾಗೂ ಕೆ.ಜಿ.ಹನುಮಂತರಾಯಪ್ಪಎಂದು ಗುರುತಿಸಲಾಗಿದೆ. ಎಚ್.ಶಿವಕುಮಾರ್, ಎ.ಮಾರೇಗೌಡ ಹಾಗೂ ಎಚ್.ಪುಟ್ಟರಾಜು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದೆ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಯು ದಿಲ್ಲಿ ಕರ್ನಾಟಕ ಭವನ ಹಾಗೂ ಮೃತರ ಹಾಗೂ ಕಾಣೆಯಾದವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇವರೆಲ್ಲರೂ ಜೆಡಿಎಸ್ ಕಾರ್ಯಕರ್ತರಾಗಿದ್ದು ಶ್ರೀಲಂಕಾ ಪ್ರವಾಸದಲ್ಲಿದ್ದರು.

ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದ ಬೆಂಬಲಕ್ಕೆ ನಾವಿದ್ದು, ಭಗವಂತನು ಅವರಿಗೆ ಈ ಆಘಾತ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೃತರ ಸಾವಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

'ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಅವರನ್ನು ನೋಡಲ್ ಅಧಿಕಾರಿಯಾಗಿ ಮುಖ್ಯ ಕಾರ್ಯದರ್ಶಿ ನೇಮಕ ಮಾಡಿದ್ದು, ಅವರು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ನಡೆಸುತ್ತಿದ್ದಾರೆ'
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News