ನಾಳೆ ಎರಡನೇ ಹಂತದ ಮತದಾನ

Update: 2019-04-22 12:28 GMT

ಬೆಂಗಳೂರು, ಎ.22 : ತೀವ್ರ ಹಣಾಹಣಿಯಿಂದ ಕೂಡಿರುವ ರಾಜ್ಯದ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಅಖಾಡ ಸಿದ್ಧಗೊಂಡಿದ್ದು, ಮಂಗಳವಾರ ಮತದಾನ ನಡೆಯಲಿದ್ದು, ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಸಿಬ್ಬಂದಿ ಇವಿಎಂ, ವಿವಿಪ್ಯಾಟ್‌ಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದಾರೆ.

ಪಾರದರ್ಶಕ, ನ್ಯಾಯಸಮ್ಮತ ಚುನಾವಣೆ ನಡೆಸುವ ಸಲುವಾಗಿ ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಪೂರ್ಣಗೊಳಿಸಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದ್ದು, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದ ಪ್ರಹ್ಲಾದ್ ಜೋಶಿ, ವಿ.ಎಸ್.ಉಗ್ರಪ್ಪ ಸೇರಿದಂತೆ ಪ್ರಮುಖ ಧುರೀಣರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

14 ಕ್ಷೇತ್ರಗಳ ಕಣದಲ್ಲಿ 237 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 2,43,03,279 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಎ.18ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.68ರಷ್ಟು ಮತದಾನವಾಗಿತ್ತು. ಎರಡನೆ ಹಂತದ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.

ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಕಲಬುರಗಿ, ಬೆಳಗಾವಿ, ಬಳ್ಳಾರಿ ಸೇರಿದಂತೆ 14 ಕ್ಷೇತ್ರಗಳಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೆ, ಮೈತ್ರಿ ಪಕ್ಷಗಳಾದ ಜೆಡಿಎಸ್ ಮೂರು ಹಾಗೂ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಉತ್ತರ ಕರ್ನಾಟಕದ 10-12 ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆ ಎಂದು ಬಿಂಬಿತವಾಗಿದ್ದು, ಮೈತ್ರಿ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲಿವೆ.

ಬಿಗಿಭದ್ರತೆ: 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 28,022 ಮತಗಟ್ಟೆಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಚುನಾವಣೆಯ ಬಂದೋಬಸ್ತ್‌ಗಾಗಿ 34,548 ಪೊಲೀಸ್ ಸಿಬ್ಬಂದಿ, 2,174 ಸೂಕ್ಷ್ಮ ವೀಕ್ಷಕರು ನಿಯೋಜನೆಗೊಂಡಿದ್ದಾರೆ. ಅಲ್ಲದೆ, 1,478 ಬೂತ್‌ಗಳಲ್ಲಿ ವಿಡಿಯೋಗ್ರಾಫರ್‌ಗಳು, 1,479 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಶಿಕ್ಷಕ ಸಾವು
ಲೋಕಸಭಾ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಾಲಾ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಸುರಪುರದ ಎಸ್‌ಪಿ ಕಾಲೇಜು ಮೈದಾನದಲ್ಲಿ ನಡೆದಿದೆ. ಶಿವಪುತ್ರ(50) ಮೃತ ಶಿಕ್ಷಕರಾಗಿದ್ದಾರೆ. ಮತಯಂತ್ರಗಳ ಮಸ್ಟರಿಂಗ್ ವೇಳೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News