ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿಜೆಪಿ - ಮೈತ್ರಿಕೂಟದ ಜಿದ್ದಾಜಿದ್ದಿನ ಕಣ!

Update: 2019-04-22 14:22 GMT

ಶಿವಮೊಗ್ಗ, ಎ. 22: ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ನೇರ ಹಣಾಹಣಿಗೆ ವೇದಿಕೆಯಾಗಿರುವ, ಮಾಜಿ ಸಿಎಂಗಳ ಪುತ್ರರಿಬ್ಬರ ಸ್ಪರ್ಧೆಯಿಂದ ಇಡೀ ರಾಷ್ಟ್ರ-ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ, ಏ. 23 ರ ಮಂಗಳವಾರ ಮತದಾನ ನಡೆಯುತ್ತಿದೆ. ಅಭ್ಯರ್ಥಿಗಳ ಹಣೆಬರಹ ಏನೆಂಬುವುದು ನಿರ್ಧಾರವಾಗಲಿದೆ. 

ಪ್ರಸ್ತುತ ಚುನಾವಣೆಯಲ್ಲಿ ಒಟ್ಟಾರೆ 12 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಇದರಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಈ ಇಬ್ಬರು ಘಟಾನುಘಟಿ ಯುವ ನಾಯಕರ ಸ್ಪರ್ಧೆ ಹಾಗೂ ಗೆಲುವಿಗೆ ಪರಸ್ಪರ ನಡೆಸುತ್ತಿರುವ ಪೈಪೋಟಿಯ ಕಾರಣದಿಂದಲೇ, ಶಿವಮೊಗ್ಗ ಕ್ಷೇತ್ರವು ರಾಜ್ಯದ ಹೈವೋಲ್ಟೇಜ್ ಕಣಗಳಲ್ಲೊಂದಾಗಿ ಪರಿವರ್ತಿತವಾಗಿದೆ. ಇಬ್ಬರಲ್ಲಿ ಜಯ ಯಾರಿಗೆ ಎಂಬ ಕುತೂಹಲ ಕೆರಳಿಸಿದೆ. 

ಮೂರು ಎಲೆಕ್ಷನ್: 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರ ಒಲಿದಿತ್ತು. ಆ ಪಕ್ಷದ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪರವರು 6,06,216 ಮತ ಪಡೆದು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಎದುರು 3,63,305 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿಯವರು 2,42,911, ಹಾಗೂ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‍ಕುಮಾರ್‍ರವರು 2,40,636 ಮತ ಪಡೆದಿದ್ದರು. 
2018 ರ ಅಕ್ಟೋಬರ್-ನವೆಂಬರ್‍ನಲ್ಲಿ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರು 5,43,306 ಮತ ಪಡೆದು ಆಯ್ಕೆಯಾಗಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪರವರು 4,91,158 ಮತ ಪಡೆದಿದ್ದರು. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ 7 ಕಡೆ ಬಿಜೆಪಿ ಹಾಗೂ 1 ಕಡೆ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಜೆಡಿಎಸ್ ಸಾಧನೆ ಶೂನ್ಯವಾಗಿದೆ.

ಮಹತ್ವದ್ದು: ಪ್ರಸ್ತುತ ಚುನಾವಣೆಯು ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪರಿಗೆ ನಾನಾ ಕಾರಣಗಳಿಂದ ಅತ್ಯಂತ ಮಹತ್ವದ್ದಾಗಿದೆ. ಸರಿಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಚುನಾವಣೆ ಎದುರಿಸುತ್ತಿರುವ ಮಧು ಬಂಗಾರಪ್ಪರವರು ಲೋಕಸಭೆ-ವಿಧಾನಸಭೆ ಸೇರಿದಂತೆ, ಒಟ್ಟಾರೆ 5 ಬಾರಿ ಕಣಕ್ಕಿಳಿದಿದ್ದಾರೆ. ಇದರಲ್ಲಿ ಅವರು ಒಮ್ಮೆ ಜಯ ಸಂಪಾದಿಸಿದ್ದಾರೆ. 

ಸುಮಾರು ಒಂದು ದಶಕದಿಂದ ಚುನಾವಣಾ ರಾಜಕಾರಣದಲ್ಲಿರುವ ಬಿ.ವೈ.ರಾಘವೇಂದ್ರರವರು ಇಲ್ಲಿಯವರೆಗೂ ಲೋಕಸಭೆ-ವಿಧಾನಸಭೆ ಸೇರಿದಂತೆ ಒಟ್ಟಾರೆ ಮೂರು ಬಾರಿ ಚುನಾವಣಾಕ್ಕಿಳಿದಿದ್ದಾರೆ. ಮೂರು ಬಾರಿಯೂ ಗೆಲುವು ಸಂಪಾದಿಸಿದ್ದಾರೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು 
ಬಿಜೆಪಿ :
ಬಿ.ವೈ.ರಾಘವೇಂದ್ರ. 
ಜೆಡಿಎಸ್-ಕಾಂಗ್ರೆಸ್ ಮೈತ್ರಿ : ಮಧು ಬಂಗಾರಪ್ಪ 

ಅಸೆಂಬ್ಲಿ ಬಲಾಬಲ
ಒಟ್ಟು 8 ವಿಧಾನಸಭಾ ಕ್ಷೇತ್ರಗಳು. 
ಬಿಜೆಪಿ : ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ತೀರ್ಥಹಳ್ಳಿ, ಸಾಗರ, ಸೊರಬ, ಬೈಂದೂರು. 
ಕಾಂಗ್ರೆಸ್ : ಭದ್ರಾವತಿ. 
ಜೆಡಿಎಸ್ : ಶೂನ್ಯ. 

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News