ಸುಷ್ಮಾ ಸ್ವರಾಜ್‌ಗೆ ಎಚ್.ಡಿ.ದೇವೇಗೌಡ ಕರೆ: ಶ್ರೀಲಂಕಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಮನವಿ

Update: 2019-04-22 15:07 GMT

ಬೆಂಗಳೂರು, ಎ.22: ಶ್ರೀಲಂಕಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ.

ಸೋಮವಾರ ಸುಷ್ಮಾ ಸ್ವರಾಜ್ ಜೊತೆ ದೂರವಾಣಿ ಮೂಲಕ ಮಾತನಾಡಿದ ದೇವೇಗೌಡರು, ಶ್ರೀಲಂಕಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಮುಂದಾಗುವಂತೆ ಹಾಗೂ ಈ ಘಟನೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ದೇವೇಗೌಡರ ಮನವಿಗೆ ಸ್ಪಂದಿಸಿರುವ ಸುಷ್ಮಾ ಸ್ವರಾಜ್ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಪದ್ಮನಾಭ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಇತ್ತೀಚೆಗೆ ಪ್ರವಾಸದ ಉದ್ದೇಶದಿಂದ ದೇಶದ ವಿವಿಧ ಭಾಗಗಳ ಜನ ಶ್ರೀಲಂಕಾಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಆದರೆ, ನಿನ್ನೆ ಅಲ್ಲಿ ನಡೆದಿರುವ ಬಾಂಬ್ ಸ್ಪೋಟದ ಘಟನೆಗಳು ಅತ್ಯಂತ ಹೇಯವಾದ ಕೃತ್ಯ ಎಂದರು.

ಶಾಂತಿ ನೆಮ್ಮದಿ ಹಾಳು ಮಾಡುವ ಕೆಲಸ ಇದಾಗಿದೆ. ಇಂತಹ ಹೇಯ ಕೃತ್ಯ ನಿಲ್ಲಿಸುವವರೆಗೆ ಜಗತ್ತಿಗೆ ಶಾಂತಿ ಎಂಬುದೇ ಇರುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಇಂತಹ ಕೃತ್ಯಗಳ ವಿರುದ್ಧ ಹೋರಾಡಬೇಕಿದೆ ಎಂದು ದೇವೇಗೌಡ ಕರೆ ನೀಡಿದರು.

ಜಗತ್ತಿನ ಎಲ್ಲ ಕಡೆ ಇಂತಹ ಕೃತ್ಯಗಳು ನಡೆಯುತ್ತಿರುವುದು ಬೇಸರ ಸಂಗತಿ. ಶ್ರೀಲಂಕಾದ ಸಂತ್ರಸ್ತರಿಗೆ ನಮ್ಮ ದೇಶವು ನೆರವು ನೀಡಬೇಕು. ಸಾವಿಗೀಡಾದದವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ದೇವೇಗೌಡ ಮನವಿ ಮಾಡಿದರು.

ಕೃಷ್ಣಭೈರೇಗೌಡ: ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟದ ಘಟನೆಯಲ್ಲಿ ಮೃತಪಟ್ಟಿರುವ ಕನ್ನಡಿಗರ ಮೃತದೇಹಗಳನ್ನು ಆದಷ್ಟು ಶೀಘ್ರದಲ್ಲಿ ರಾಜ್ಯಕ್ಕೆ ತರುವ ಸಂಬಂಧ ಕೇಂದ್ರ ಸರಕಾರ ಹಾಗೂ ಶ್ರೀಲಂಕಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ವಿದ್ಯಾರಣ್ಯಪುರದಲ್ಲಿರುವ ರಂಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರೆಲ್ಲರೂ ಸಾಕಷ್ಟು ಕೆಲಸ ಮಾಡಿದ್ದರು. ಆದರೆ, ಈಗ ಅವರು ಬಾಂಬ್‌ಸ್ಪೋಟದಲ್ಲಿ ಮೃತಪಟ್ಟಿರುವ ಸುದ್ದಿ ಕೇಳಿ ಆಘಾತವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News