ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ; ಐವರು ಕನ್ನಡಿಗರು ಮೃತ್ಯು; ಇಬ್ಬರು ನಾಪತ್ತೆ

Update: 2019-04-22 14:58 GMT

ಬೆಂಗಳೂರು, ಎ.22: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದುರ್ಘಟನೆಯಲ್ಲಿ ರಾಜ್ಯದ ಐದು ಮಂದಿ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನ 8ನೇ ಮೈಲಿಯ ಕೆ.ಜಿ.ಹನುಮಂತರಾಯಪ್ಪ, ನೆಲಮಂಗಲ ತಾಲೂಕಿನ ಗೋವೇನಹಳ್ಳಿ ಎಚ್. ಶಿವಕುಮಾರ್, ಕಾಚನಹಳ್ಳಿಯ ಮುನಿಯಪ್ಪ ರಂಗಪ್ಪ, ಕೆ.ಎಂ.ಲಕ್ಷ್ಮೀನಾರಾಯಣ್ ಹಾಗೂ ತುಮಕೂರಿನ ಲಕ್ಷ್ಮಣಗೌಡ ರಮೇಶ್ ಶ್ರೀಲಂಕಾ ಬಾಂಬ್ ಸ್ಪೋಟದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಇವರೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ಮಾರೇಗೌಡ, ಹಾರೋಕ್ಯಾತನಹಳ್ಳಿ ಪುಟ್ಟರಾಜು ಎಂಬುವರು ನಾಪತ್ತೆಯಾಗಿದ್ದು, ಅವರ ಪತ್ತೆಕಾರ್ಯ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

ಪ್ರವಾಸಕ್ಕೆ ಹೋಗಿದ್ದರು: ನೆಲಮಂಗಲ ಮತ್ತು ತುಮಕೂರಿನವರಾದ ಈ ಏಳು ಮಂದಿ ಸ್ನೇಹಿತರಾಗಿದ್ದು, ಪ್ರತಿ ವರ್ಷ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಜೆಡಿಎಸ್ ಮುಖಂಡರಾಗಿದ್ದ ಇವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಪರ ಪ್ರಚಾರ ನಡೆಸಿದ್ದರು ಎಂದು ತಿಳಿದುಬಂದಿದೆ.

ಚುನಾವಣೆ ಮುಗಿದ ಬಳಿಕ ಏ.20 ರಂದು ಶ್ರೀಲಂಕಾ ಪ್ರವಾಸ ಕೈಗೊಂಡು ರವಿವಾರ ಬೆಳಗ್ಗೆ ಕೊಲಂಬೊದಲ್ಲಿರುವ ಶಾಂಗ್ರಿಲಾ ಹೊಟೇಲ್‌ನಲ್ಲಿ ತಂಗಿದ್ದರು. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.

ಹೊಟೇಲ್‌ನ 6ನೇ ಮಹಡಿಯಲ್ಲಿರುವ 618 ಮತ್ತು 619ನೆ ರೂಮಿನಲ್ಲಿ ತಂಗಿದ್ದ ಎಲ್ಲರೂ ಸ್ನಾನ ಮುಗಿಸಿ ಬೆಳಗ್ಗೆ 8:45ರ ಸುಮಾರಿಗೆ ಹೊಟೇಲ್‌ನ ಮೂರನೆ ಮಹಡಿಯಲ್ಲಿರುವ ಊಟದ ಹಾಲ್‌ಗೆ ಆಗಮಿಸಿದ್ದರು. ಈ ಎಲ್ಲರೂ ಊಟದ ಹಾಲ್‌ಗೆ ಆಗಮಿಸಿದ ಸಂದರ್ಭದಲ್ಲೇ ಬಾಂಬ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಇಬ್ಬರು ನಾಪತ್ತೆಯಾಗಿದ್ದು, ಮೃತಪಟ್ಟವರ ಮನೆಯಲ್ಲಿ ನೋವಿನ ಆಕ್ರಂದನ ಮುಗಿಲು ಮುಟ್ಟಿದೆ. ಅದೇ ರೀತಿ, ಶಾಂಗ್ರಿಲಾ ಹೊಟೇಲ್ ಪಕ್ಕದ ಹಿಲ್ಟನ್ ಹೊಟೇಲ್‌ನಲ್ಲಿ ತಂಗಿದ್ದ 8-10 ಕನ್ನಡಿಗರು ಸೇರಿದಂತೆ 30 ಜನರನ್ನು 80 ಕಿ.ಮೀ.ದೂರದ ಬೇರೆ ಹೊಟೇಲ್‌ಗೆ ಸೈನಿಕರು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಮೊಯ್ಲಿ ಮನವಿ

ಮೃತಪಟ್ಟಿರುವ ಐವರ ಮೃತದೇಹಗಳು ಗುರುತು ಪತ್ತೆಯಾಗಿದ್ದು, ಉಳಿದವರ ಗುರುತು ಪತ್ತೆಯಾಗಬೇಕಿದೆ ಎಂದು ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಬೆಂಗಳೂರಿನ ನೆಲಮಂಗಲದ ಹನುಮಂತರಾಯಪ್ಪ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ಥಿವ ಶರೀರಗಳ ಗುರುತು ಸಿಕ್ಕ ಬಳಿಕ ಅವುಗಳನ್ನು ರಾಜ್ಯಕ್ಕೆ ತರಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News