ವಿಜಯಪುರ: ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

Update: 2019-04-22 15:14 GMT

ವಿಜಯಪುರ : ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಮಂಗಳವಾರ ನಡೆಯಲಿರುವ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೋಮವಾರ ಮಸ್ಟರಿಂಗ್ ಕಾರ್ಯ ಪೂರ್ಣಗೊಳಿಸಿ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಲು ಸಿದ್ಧತೆ ಕೈಗೊಂಡರು. 

ವಿಜಯಪುರದ ದರಬಾರ ಹೈಸ್ಕೂಲ್ ಆವರಣದಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳ ಹಾಗೂ ಸೈನಿಕ ಶಾಲೆಯ ಆವರಣದಲ್ಲಿ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳ ಮಸ್ಟರಿಂಗ್ ಪ್ರಕ್ರಿಯೆ ನಡೆಯಿತು. ಬೆಳಿಗ್ಗೆಯಿಂದಲೇ ಚುನಾವಣಾ ಸಿಬ್ಬಂದಿ ಸೈನಿಕ ಶಾಲೆ ಹಾಗೂ ದರ್ಬಾರ್ ಶಾಲೆಯತ್ತ ಹೆಜ್ಜೆ ಹಾಕಿದರು.

ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್, ವಿವಿಪ್ಯಾಟ್, ಇವಿಎಂ ಸೀಲ್ ಮಾಡುವ ಟ್ಯಾಗ್, ಕ್ಯಾಂಡಲ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸಾಮಗ್ರಿಗಳನ್ನು ಪಡೆದುಕೊಂಡು ತಾವು ನಿಯೋಜಿತರಾಗಿರುವ ಮತಗಟ್ಟೆ ಕೇಂದ್ರಗಳತ್ತ ಪ್ರಯಾಣ ಬೆಳೆಸಿದರು.

ತಮಗೆ ಯಾವ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ನಂತರ ಇವಿಎಂ ಮಷೀನ್, ವಿವಿ ಪ್ಯಾಟ್‍ಗಳ ತಾಂತ್ರಿಕ ವಿವರಣೆ ಹಾಗೂ ಪರಿಶೀಲನೆ ನಡೆಸಿದರು. ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ವಿಶೇಷ ಡೆಸ್ಕ್ ಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿ ನಿಯೋಜನೆಗೊಂಡಿರುವ ಸ್ಥಳ, ಅದೇ ಸ್ಥಳಕ್ಕೆ ನಿಯೋಜಿತಗೊಂಡಿರುವ ಇನ್ನಿತರ ಸಿಬ್ಬಂದಿಗಳ ವಿವರವನ್ನು ನೀಡಲಾಯಿತು. 

ಜಿಲ್ಲೆಯ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಒಟ್ಟು 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.  ಪ್ರಸ್ತುತ ವಿಜಯಪುರ ಲೋಕಸಭಾ ಮತಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ 1795931 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಅದರಲ್ಲಿ 921258 ಪುರುಷ ಮತದಾರರು, 874404 ಮಹಿಳಾ ಮತದಾರರು ಮತ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

ವಿಶೇಷ ಬಸ್ - ಕೋಲ್ಡ್ ವಾಟರ್ 
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದ ಆಯಾ ತಾಲೂಕಿನ ಕೇಂದ್ರಗಳಿಗೆ ತೆರಳಲು ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆಯಾ ತಾಲೂಕಾ ಕೇಂದ್ರದ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಯವರೆಗೂ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. 

ದರಬಾರ ಹೈಸ್ಕೂಲ್ ಮೈದಾನ, ಸೈನಿಕ ಶಾಲೆಯಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಕರೆದುಕೊಂಡು ಹೋಗಲು ಕೆಎಸ್ಸಾರ್ಟಿಸಿ ಬಸ್‍ಗಳು ಸಾಲು ಸಾಲಾಗಿ ನಿಂತಿದ್ದವು, ಯಾವ ಕ್ಷೇತ್ರಕ್ಕೆ ಯಾವ ಬಸ್ ಹೋಗುತ್ತದೆ ಎಂಬ ಮಾಹಿತಿ ಕಲೆ ಹಾಕಿ ಸಿಬ್ಬಂದಿ ಬಸ್ ಹತ್ತಿ ಕರ್ತವ್ಯಕ್ಕೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

258 ಸಾರಿಗೆ ಇಲಾಖೆಯ ಬಸ್‍ಗಳು ಹಾಗೂ ಶಾಲಾ ವಾಹನ, ಮಿನಿ ಕ್ರೂಸರ್, ಜೀಪ್ ಸೇರಿದಂತೆ ಒಟ್ಟು 408 ವಾಹನಗಳನ್ನು ಮತದಾನ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ದರ್ಬಾರ್ ಶಾಲೆ ಹಾಗೂ ಸೈನಿಕ ಶಾಲೆಯ ಆವರಣದಲ್ಲಿಯೇ ಸಿಬ್ಬಂದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಬಿರು ಬಿಸಲು 43 ಡಿಗ್ರಿ ಸೆಲ್ಸಿಯಸ್‍ಗೆ ತಲುಪಿದೆ, ಇವತ್ತು ಸಹ ಬಿಸಿಲಿನ ಪ್ರಖರತೆ ಸಹ ಹೆಚ್ಚಾಗಿತ್ತು. ಈ ಉದ್ದೇಶದಿಂದಲೇ ಸಿಬ್ಬಂದಿಯ ಅನುಕೂಲಕ್ಕಾಗಿ ಕೋಲ್ಡ್ ಮಿನರಲ್ ವಾಟರ್ ಕ್ಯಾನ್ ಮೂಲಕ ತಂಪು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮಜ್ಜಿಗೆ ಸಹ ವಿತರಿಸಲಾಯಿತು. 

ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಪರ್ವವಿದ್ದಂತೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದು ಒಂದು ತರಹ ಖುಷಿ ನೀಡಿದೆ. ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ತಂಪು ನೀರು, ಉಪಹಾರ, ವಾಹನ ವ್ಯವಸ್ಥೆ ಎಲ್ಲವನ್ನೂ ಅಚ್ಚುಕಟ್ಟುತನದಿಂಧ ನೀಡಲಾಗಿದೆ. ತಂಪುಪಾನೀಯ, ಮಜ್ಜಿಗೆ ಸಹ ಒದಗಿಸಿರುವುದು ಬಿಸಿಲಿನಿಂದ ಬಸವಳಿಯುವುದು ತಪ್ಪುತ್ತದೆ ಎಂದು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಎಂಜಿವಿಸಿ ಮಹಾವಿದ್ಯಾಲಯ, ದೇವರಹಿಪ್ಪರಗಿಯಲ್ಲಿ ಎ.ಬಿ. ಸಾಲಕ್ಕಿ ಪದವಿಪೂರ್ವ ಮಹಾವಿದ್ಯಾಲಯ, ಬಸವನ ಬಾಗೇವಾಡಿಯಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯ, ಬಬಲೇಶ್ವರದಲ್ಲಿ ಸರ್ಕಾರಿ ಐಟಿಐ ಕಾಲೇಜ್,  ಇಂಡಿಯಲ್ಲಿ ಆದರ್ಶ ಮಹಾವಿದ್ಯಾಲಯ, ಸಿಂದಗಿಯಲ್ಲಿ ಪಿ.ಜಿ. ಪೋರವಾಲ -ಎ.ಡಿ. ಪಾಟೀಲ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಸ್ಟರಿಂಗ್ ಕೇಂದ್ರಗಳಿಂದಲೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಪೂರಕ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News