ಮೈಸೂರು: ಪೊಲೀಸರಿಗೆ ಮೋಸ ಮಾಡಲು ಯತ್ನಿಸಿದ ನಕಲಿ ಪೊಲೀಸ್ ಅಧಿಕಾರಿ ಬಂಧನ

Update: 2019-04-22 15:27 GMT

ಮೈಸೂರು,ಎ.22: ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಗೆ ಹಾಗೂ ಪೊಲೀಸ್ ಅಧಿಕಾರಿಗೆ ಮೋಸ ಮಾಡಲು ಯತ್ನಿಸುತ್ತಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸುವಲ್ಲಿ ಕೆ.ಆರ್. ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ವಿಜಯನಗರ 3 ನೇ ಹಂತದ ನಿವಾಸಿ ಸಿ.ಎನ್.ದಿಲೀಪ್ (35 ವರ್ಷ) ಎಂಬಾತನೇ ನಕಲಿ ಐಪಿಎಸ್ ಅಧಿಕಾರಿ. ಎ.14 ರಂದು ಸಂಜೆ ಕೆ.ಆರ್.ಪೊಲೀಸ್ ಠಾಣೆಗೆ ಕರೆ ಮಾಡಿ, ನಾನು ಐಪಿಎಸ್ ಅಧಿಕಾರಿ, ನಮ್ಮ ಕುಟುಂಬದವರು ಪ್ರವಾಸಕ್ಕೆ ತೆರಳುತ್ತಿದ್ದೇವೆ. ಒಂದು ಟೊಯೋಟಾ ಇನೋವಾ ಎಸಿ ಕಾರ್ ವ್ಯವಸ್ಥೆ ಮಾಡಿ ಎಂದು ಸಬ್ ಇನ್ಸಪೆಕ್ಟರ್ ಸುನೀಲ್ ಗೆ ತಿಳಿಸಿದ್ದಾರೆ. ನಂತರ ಸುನೀಲ್ ಅವರು ಇನ್ಸ್ ಪೆಕ್ಟರ್ ವಿ.ನಾರಾಯಣಸ್ವಾಮಿ ಗೆ ವಿಷಯ ತಿಳಿಸಿದ್ದಾರೆ.

ನಕಲಿ ಐಪಿಎಸ್ ಅಧಿಕಾರಿಗೆ ಮತ್ತೆ ಕಾಲ್ ಮಾಡಿದ ಪೊಲೀಸರು ನೀವು ಯಾವ ವರ್ಷದಲ್ಲಿ ಕೆಲಸಕ್ಕೆ ಸೇರಿದ್ದೀರಾ ಎಂಬ ಮಾಹಿತಿ ನೀಡಿ ಎಂದು ಕೇಳಿದ್ದಾರೆ. ಆತ ಕೂಡ 2019 ರ ಜನವರಿ1 ರ ಅಧಿಸೂಚನೆಯ ಕ್ರಮ ಸಂಖ್ಯೆ ತಿಳಿಸಿದ್ದು ಅದರಲ್ಲಿ ದಿಲೀಪ್ ಮಾಹಿತಿ ಇಲ್ಲದ ಕಾರಣ ಈತ ನಕಲಿ ಐಪಿಎಸ್ ಅಧಿಕಾರಿ ಎಂದು ಸ್ಪಷ್ಟವಾದ ಹಿನ್ನಲೆಯಲ್ಲಿ ಕೆ.ಆರ್.ಠಾಣಾ ಪೊಲೀಸರು ಆರೋಪಿ ದಿಲೀಪ್ ನನ್ನು ಬಂಧಿಸಿ ಐಪಿಸಿ ಸೆಕ್ಷನ್ 170,419,420,463,468,471 ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುತ್ತುರಾಜ್,ಕೆಎಸ್ ಪಿಎಸ್,ಉಪ ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಕೆ.ಆರ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜಿ.ಟಿ.ನಾಯಕ್ ಅವರ ಮಾರ್ಗದರ್ಶನದಲ್ಲಿ ಕೆ.ಆರ್ ಠಾಣೆಯ ಪೊಲೀಸ್  ಇನ್ಸಪೆಕ್ಟರ್ ವಿ.ನಾರಾಯಣ ಸ್ವಾಮಿ ನೇತೃತ್ವದಲ್ಲಿ ಸಬ್ ಇನ್ಸಪೆಕ್ಟರ್ ಸುನೀಲ್ ಸಿಬ್ಬಂದಿಗಳಾದ ಸುಬ್ರಮಣಿ, ಮೊಖದ್ದರ್ ಷರೀಫ್ ಪತ್ತೆ ಕಾರ್ಯ ನಡೆಸಿದ್ದು, ಈ ಕಾರ್ಯಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಶ್ಲಾಘಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News