ರಾಜ್ಯ ಸರಕಾರದ ಕಟ್ಟಡದಲ್ಲಿದ್ದ ಬಿಜೆಪಿ ಐಟಿ ಸೆಲ್ ನ ಕಾಲ್ ಸೆಂಟರ್ ಮುಚ್ಚಿಸಿದ ಪೊಲೀಸರು

Update: 2019-04-22 17:20 GMT

ಕಲಬುರಗಿ, ಎ. 22: ಫೋನ್ ಕರೆ ಮಾಡಿ ಬಿಜೆಪಿಗೆ ಮತ ನೀಡುವಂತೆ ಮತದಾರರ ಮನವೊಲಿಸಲು ಬಳಸುತ್ತಿದ್ದ ಕಲಬುರಗಿಯ ಬಿಜೆಪಿ ಐಟಿ ಸೆಲ್‌ನ ಕಾಲ್ ಸೆಂಟರ್ ಒಂದನ್ನು ಪೊಲೀಸ್ ಅಧಿಕಾರಿಗಳು ಸೋಮವಾರ ಮುಚ್ಚಿಸಿದ್ದಾರೆ.

ಕಲಬುರಗಿ ಐಟಿ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ಮಂಡಳಿ (ಕಿಯೋನಿಕ್ಸ್)ಯಲ್ಲಿ ಮತದಾರರಿಗೆ ಕರೆ ಮಾಡಿ ಬಿಜೆಪಿಗೆ ಮತ ನೀಡುವಂತೆ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಸ್ವೀಕರಿಸಿದ ಬಳಿಕ ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಕಾಲ್ ಸೆಂಟರ್ ಅನ್ನು ಮುಚ್ಚಿಸಿದರು.

‘‘ದೊಡ್ಡ ಸಭಾಂಗಣದಲ್ಲಿ 12ರಿಂದ 13 ಜನರು ಇರುವುದನ್ನು ನಾವು ಪತ್ತೆ ಮಾಡಿದೆವು. ಅವರು ಉತ್ತರ ಕರ್ನಾಟಕದ ಮತದಾರರ ಪಟ್ಟಿಯನ್ನು ಹೊಂದಿದ್ದರು. ಅವರಲ್ಲಿ ಮೊಬೈಲ್ ನಂಬರ್‌ನ ಪಟ್ಟಿ ಕೂಡ ಇತ್ತು. ಇಲ್ಲಿಂದ ಅವರು ಮತದಾರರಿಗೆ ಕರೆ ಮಾಡುತ್ತಿದ್ದರು. ಇದಕ್ಕೆ ಅವರು ಅನುಮತಿ ಪಡೆದುಕೊಂಡಿರಲಿಲ್ಲ’’ ಎಂದು ಕಲಬುರಗಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಲ್ ಸೆಂಟರ್ ನಡೆಸುತ್ತಿದ್ದ ಆರೋಪಿ ಕಲಬುರಗಿಯ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಶರಣ್ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರು ಈ ಕಚೇರಿಗೆ ಬೀಗ ಮುದ್ರೆ ಹಾಕಿದ್ದಾರೆ. ಶರಣ್ ಹಾಗೂ ಅವರ ಪಕ್ಷದ ಕಾರ್ಯಕರ್ತರ ವಿರುದ್ಧ ರವಿವಾರ ಪ್ರಕರಣ ದಾಖಲಿಸಲಾಗಿದೆ. ಪೊಲೀಸರಿಗೆ ಧ್ವನಿ ದತ್ತಾಂಶ ಸಂಗ್ರಹಿಸಲು ಸಾಧ್ಯವಾಗಿಲ್ಲ. ಆದರೆ, ಮತದಾರರಿಗೆ ಕರೆ ಮಾಡಲು ಹಾಗೂ ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಲು ಬಿಜೆಪಿ ಕಾರ್ಯಕರ್ತರು ಈ ಕಚೇರಿಯನ್ನು ಬಳಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಮಾದರಿ ನೀತಿ ಸಂಹಿತೆ ಪ್ರಕಾರ ಚುನಾವಣಾ ಆಯೋಗದ ಅನುಮತಿ ಇಲ್ಲದೆ ಸರಕಾರಿ ಕಟ್ಟಡವನ್ನು ನಿರ್ದಿಷ್ಟ ರಾಜಕೀಯ ಉದ್ದೇಶಗಳಿಗೆ ಬಳಸುವಂತಿಲ್ಲ. ಕಲಬುರಗಿಯಲ್ಲಿ ಮೂರನೇ ಹಂತದ ಚುನಾವಣೆ ಎಪ್ರಿಲ್ 23ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News