ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಸಾಗರ ಸಜ್ಜು

Update: 2019-04-22 17:21 GMT

ಸಾಗರ, ಎ.22: ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ತಾಲೂಕಿನಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸೋಮವಾರ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ದರ್ಶನ್ ಪಿ.ವಿ. ಅಂತಿಮ ಸುತ್ತಿನ ಪರಿಶೀಲನೆ ನಡೆಸಿದರು.

ತಾಲೂಕಿನಲ್ಲಿ 264 ಬೂತ್‌ಗಳನ್ನು ನಿರ್ಮಿಸಲಾಗಿದ್ದು, ಇವುಗಳ ಪೈಕಿ ಸಾಗರ ನಗರದ ಬೆಳಲಮಕ್ಕಿ ಶಾಸಕರ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ರಾಮನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಖಿ ಬೂತ್ ಆಗಿ ನಿರ್ಮಿಸಲಾಗಿದೆ. ವಳೂರು ಮತಗಟ್ಟೆ 239ನ್ನು ಬುಡಕಟ್ಟು ಮತಗಟ್ಟೆಯಾಗಿ ರೂಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಮಾಹಿತಿ ನೀಡಿದರು.

ಮತಗಟ್ಟೆ ಕಾರ್ಯಕ್ಕಾಗಿ ಒಟ್ಟು 1,152 ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 20 ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಮೈಕ್ರೋ ಅಬ್ಸರ್ವರ್ ನೇಮಕ ಮಾಡಲಾಗಿದ್ದು, 23 ಸೂಕ್ಷ್ಮ ಮತಗಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸೋಮವಾರ ತಮಗೆ ಸೂಚಿಸಿದ ಮತಗಟ್ಟೆಗಳಿಗೆ ಇವಿಎಂ ಯಂತ್ರ ಹೊತ್ತು ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿ ತೆರಳಿದರು. ಇವರಿಗೆ 35 ಬಸ್ ಹಾಗೂ 36 ಸಣ್ಣ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ರಕ್ಷಣಾ ದೃಷ್ಟಿಯಿಂದ ಎಎಸ್ಪಿ ಯತೀಶ್ ಎನ್. ನೇತೃತ್ವದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು , 4 ಸರ್ಕಲ್ ಇನ್‌ಸ್ಪೆಕ್ಟರ್, 11 ಸಬ್-ಇನ್‌ಸ್ಪೆಕ್ಟರ್ , 17 ಎಎಸ್ಸೈ , 54 ದಫೇದಾರ್ ಮತ್ತು 118 ಪೊಲೀಸ್ ಪೇದೆಯ ಜೊತೆಗೆ 187 ಹೋಂಗಾರ್ಡ್‌ಗಳನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ 2 ಕೆಎಸ್‌ಆರ್‌ಪಿ ತುಕಡಿ, 1 ಕೆಎಸ್‌ಆರ್‌ಪಿ ವಿಶೇಷ ತುಕಡಿ, 4 ಡಿಆರ್ ಜೊತೆಗೆ 23 ಮೊಬೈಲ್ ಸೆಕ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಾಗಾಧಿಕಾರಿ ದರ್ಶನ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News