ಚಿಕ್ಕಮಗಳೂರು ನಗರಕ್ಕೆ ಕಲುಷಿತ ನೀರು ಪೂರೈಕೆ: ನಾಗರಿಕ ಹಕ್ಕು ಹೋರಾಟ ವೇದಿಕೆ ಆರೋಪ

Update: 2019-04-22 17:31 GMT

ಚಿಕ್ಕಮಗಳೂರು, ಎ.22: ನಗರಕ್ಕೆ ಸರಬರಾಜಾಗುತ್ತಿರುವ ಕುಡಿಯುವ ನೀರನ್ನು ಶುದ್ಧೀಕರಿಸದೆ ಎಲ್ಲಾ ಬಡಾವಣೆಗಳಿಗೂ ಪೂರೈಸುತ್ತಿರುವುದರಿಂದ ನಾಗರಿಕರು ವಿವಿಧ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ನಗರಸಭೆಯು ನಗರದ ಜನರಿಗೆ ಕಲುಷಿತ ನೀರನ್ನು ಪೂರೈಕೆ ಮಾಡುತ್ತಿದ್ದು, ನಗರಕ್ಕೆ ಶುದ್ಧೀಕರಿಸಿದ ನೀರನ್ನು ಪೂರೈಸಲು ಒತ್ತಾಯಿಸಿ ಎ.24ರಂದು ನಾಗರಿಕ ಹಕ್ಕು ಹೋರಾಟ ವೇದಿಕೆ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಚಾಲಕ ವಿಜಯ್‌ಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರ ದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ನಗರದ ಜನತೆ ಕುಡಿಯುವ ನೀರಿಗಾಗಿ ಯಗಚಿ ಡ್ಯಾಂ ಹಾಗೂ ಹಿರೇಕೊಳಲೆ ಕೆರೆಯ ನೀರನ್ನು ಅವಲಂಬಿಸಿದ್ದಾರೆ. ನಗರಸಭೆಯು ನಗರದ ಎಲ್ಲಾ ಬಡಾವಣೆಗಳಿಗೂ ಯಗಚಿ ಹಾಗೂ ಹಿರೇಕೊಳಲೆ ಕೆರೆ ನೀರನ್ನೇ ಸರಬರಾಜು ಮಾಡುತ್ತಿದೆ. ನಗರದಲ್ಲಿ ಶುದ್ಧೀಕರಣ ಘಟಕವಿದ್ದರೂ ನಗರಸಭೆಯು ಈ ನೀರನ್ನು ಘಟಕದಲ್ಲಿ ವೈಜ್ಞಾನಿಕವಾಗಿ, ವ್ಯವಸ್ಥಿತ ರೀತಿಯಲ್ಲಿ ಶುದ್ಧೀಕರಣ ಮಾಡದೆ ನೀರು ಪೂರೈಸುತ್ತಿರುವುದರಿಂದ ನಗರದ ವಿವಿಧ ಬಡಾವಣೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಆರೋಪಿಸಿದರು.

ಕಲುಷಿತ ನೀರು ಪೂರೈಸುತ್ತಾ ನಗರದ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ನಗರಸಭೆ ವಿರುದ್ಧ ಎ.24ರಂದು ಬೆಳಗ್ಗೆ 11ಕ್ಕೆ ಧರಣಿ ಹಮ್ಮಿಕೊಳ್ಳಲಾಗಿದೆ. ನಗರದ ರಾಮನಹಳ್ಳಿಯಲ್ಲಿರುವ ಫಿಲ್ಟರ್‌ಬೆಡ್ ಘಟಕದ ಆವರಣದಲ್ಲೇ ಧರಣಿಗೆ ಚಾಲನೆ ನೀಡಲಾಗುವುದು ಎಂದ ವಿಜಯ್‌ಕುಮಾರ್, ಧರಣಿ ವೇಳೆ ನಗರಕ್ಕೆ ಶುದ್ಧೀಕರಿಸಿದ ನೀರು ಪೂರೈಕೆ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಲಾಗುವುದು. ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಅವರು ತಿಳಿಸಿದರು.

ನಗರಸಭೆಯು ಸದ್ಯ ನಿವಾಸಿಗಳಿಗೆ ಪೂರೈಕೆ ಮಾಡುತ್ತಿರುವ ನೀರು ಕಂದು ಬಣ್ಣದಿಂದ ಕೂಡಿದ್ದು, ಮನೆಗಳಲ್ಲಿ ಸಂಗ್ರಹಿಸಿದ ನೀರು ದುರ್ವಾಸನೆಯಿಂದ ಕೂಡಿದೆ. ಕಸ, ಕಡ್ಡಿಗಳು ನೀರಿನೊಂದಿಗೆ ಮಿಶ್ರಣವಾಗಿ ಬರುತ್ತಿದೆ. ನಗರದಲ್ಲಿ ಯುಜಿಡಿ ಅಪೂರ್ಣ ಕಾಮಗಾರಿಯಿಂದಾಗಿ ಕೊಳಚೆ ನೀರು ಚರಂಡಿಗಳಲ್ಲಿ ಹರಿದು ಯಗಚಿ ಹಳ್ಳದ ಮೂಲಕ ಯಗಚಿ ಡ್ಯಾಂ ಹಾಗೂ ಹಿರೇಕೊಳಲೆ ಕೆರೆ ಸೇರುತ್ತಿದೆ. ಅದೇ ನೀರನ್ನು ನಗರಸಭೆ ಆಡಳಿತ ಚಿಕ್ಕಮಗಳೂರಿನಲ್ಲಿರುವ ಪಿಲ್ಟರ್ ಬೆಡ್‌ನಲ್ಲಿ ಸಂಗ್ರಹಿಸುತ್ತಿದೆ. ಹೀಗೆ ಸಂಗ್ರಹಿಸದ ನೀರನ್ನು ಶುದ್ಧೀಕರಿಸದೆ ಸರಬರಾಜು ಮಾಡುತ್ತಿರುವುದರಿಂದ ನಗರದ ಜನತೆ ಕೊಳಚೆ ನೀರನ್ನು ಕುಡಿದು ಡೆಂಗ್‌ನಂತಹ ಮಾರಕ ರೋಗಗಳಿಗೆ ನಾಗರಿಕರು, ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.

ನಗರದಲ್ಲಿರುವ ಪಿಲ್ಟರ್ ಬೆಡ್‌ಅನ್ನು ನಗರಸಭೆ ಕಳೆದ ಅನೇಕ ವರ್ಷಗಳಿಂದ ಸ್ವಚ್ಛ ಮಾಡಿಲ್ಲ. ಆದ್ದರಿಂದ ನಗರದ ಜನರ ಉತ್ತಮ ಆರೋಗ್ಯದ ದೃಷ್ಟಿಯಿಂದ ಶುದ್ಧೀಕರಿಸಿದ ನೀರನ್ನೇ ಸಾರ್ವಜನಿಕರಿಗೆ ಪೂರೈಕೆ ಮಾಡಬೇಕೆಂದು ವಿಜಯ್‌ಕುಮಾರ್ ಒತ್ತಾಯಿಸಿದರು.

ವೇದಿಕೆಯ ಮತ್ತೋರ್ವ ಸಂಚಾಲಕ ಡಾ.ದೊಡ್ಡಮಲ್ಲೇಗೌಡ ಹಾಗೂ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಮಾತನಾಡಿ, ನಗರದ ಸಾರ್ವಜನಿಕರ ಉತ್ತಮ ಆರೋಗ್ಯದ ದೃಷ್ಟಿಯಿಂದ ಈ ಹೋರಾಟ ರೂಪಿಸಲಾಗುತ್ತಿದೆ. ಈ ಹೋರಾಟ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧವಲ್ಲ. ಅಶುದ್ಧ ನೀರು ವಿವಿಧ ಕಾಯಿಲೆಗಳ ಮೂಲವಾಗಿದೆ. ನಗರದಲ್ಲಿ ಶುದ್ಧೀಕರಿಸದ ನೀರು ಪೂರೈಕೆ ಮಾಡುತ್ತಿರುವುದರಿಂದ ಶುದ್ಧ ನೀರಿಗಾಗಿ ಎಲ್ಲಾ ನಾಗರಿಕರು ಧ್ವನಿ ಎತ್ತಬೇಕಿದೆ. ಜಿಲ್ಲಾಡಳಿತ, ನಗರಸಭೆ ಹಾಗೂ ಜನಪ್ರತಿನಿಧಿಗಳು ಶುದ್ಧ ನೀರಿನ ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಗರಿಕರ ಹಕ್ಕು ಹೋರಾಟ ಸಮಿತಿಯ ಇತರ ಸಂಚಾಲಕರಾದ ಚಂದ್ರೇಗೌಡ, ಬಶೀರ್ ಅಹ್ಮದ್, ಪ್ರೇಮ್‌ಕುಮಾರ್, ಮಹೇಶ್, ಕಲೀಲ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News