ಅಪಘಾತದ ಬಳಿಕ ಕೋಮಾಕ್ಕೆ ಹೋದ ಮುನೀರಾ 27 ವರ್ಷಗಳ ಬಳಿಕ ಮತ್ತೆ ಮಾತನಾಡಿದರು !

Update: 2019-04-23 16:56 GMT

ಯುಎಇ: 1991ರಲ್ಲಿ ತನ್ನ ನಾಲ್ಕು ವರ್ಷದ ಮಗ ಒಮರ್ ನನ್ನು ಶಾಲೆಯಿಂದ ಕರೆದುಕೊಂಡು ಕಾರಿನಲ್ಲಿ ಹೊರಟ ಮುನೀರಾ ಅಬ್ದುಲ್ಲಾ ಆತನನ್ನು ನೋಡಿದ್ದು ಈಗ  27 ವರ್ಷಗಳ ಬಳಿಕ !

ಇಂತಹದೊಂದು ನಂಬಲಸಾಧ್ಯ ಘಟನೆ ನಡೆದಿರುವುದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ. ಕಾರು ಅಪಘಾತದಲ್ಲಿ  ಮೆದುಳಿಗೆ ತೀವ್ರ ಪೆಟ್ಟಾಗಿ ಕೋಮಾಕ್ಕೆ ಹೋಗಿದ್ದ ಮಹಿಳೆ 27 ವರ್ಷಗಳ ಬಳಿಕ ಪವಾಡಸದೃಶರಾಗಿ ಮತ್ತೆ ಪ್ರಜ್ಞೆಗೆ ಮರಳಿದ್ದು ಈಗ ಮಾತನಾಡುತ್ತಿದ್ದಾರೆ ! ತನ್ನ ತಾಯಿ ತನ್ನನ್ನು ಹೆಸರು ಹೇಳಿ ಕರೆದು ಮಾತನಾಡುತ್ತಿರುವುದನ್ನು ನೋಡಿ ಅಂದಿನ ನಾಲ್ಕು ವರ್ಷದ ಇಂದಿನ 32 ವರ್ಷದ ಪುತ್ರನ ಸಂಭ್ರಮಕ್ಕೆ ಪಾರವೇ ಇಲ್ಲ. 
ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮುನೀರಾ ಬಸ್ಸೊಂದು ತನ್ನ ಕಾರಿಗೆ ಅಪ್ಪಳಿಸಲು ಬರುತ್ತಿರುವುದನ್ನು ನೋಡಿ ತನ್ನ ಜೊತೆಗಿದ್ದ ಪುತ್ರನನ್ನ ರಕ್ಷಿಸಲು ಬಿಗಿದಪ್ಪಿ ಹಿಡಿದಿದ್ದಳು. ಆಕೆಗೆ ತಲೆಗೆ ಗಂಭೀರವಾಗಿ ಗಾಯವಾದರೆ ಆಕೆಯ ಅಪ್ಪುಗೆಯಲ್ಲಿದ್ದ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. 

ಅಂದು ಪ್ರಜ್ಞೆ ಕಳೆದುಕೊಂಡು ಕೋಮಾಕ್ಕೆ ಹೋಗಿದ್ದ ಮುನೀರಾ ಕಳೆದ ವರ್ಷ ಯಾರೂ ಊಹಿಸದ ರೀತಿಯಲ್ಲಿ ಜರ್ಮನಿಯ ಆಸ್ಪತ್ರೆಯೊಂದರ ಕೊಠಡಿಯಲ್ಲಿ ಕಣ್ಣು ತೆರೆದು ಆಸ್ಪತ್ರೆ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದ ತನ್ನ ಪುತ್ರನನ್ನು ಕರೆದಿದ್ದಾರೆ ! ಅಷ್ಟೇ ಅಲ್ಲ, ಅದಾದ ಕೆಲವೇ ದಿನಗಳಲ್ಲಿ ಕುರ್ ಆನ್ ಸೂಕ್ತಗಳನ್ನು ಪಠಿಸಲು ಪ್ರಾರಂಭಿಸಿದ ಮುನೀರಾ ಈಗ ತನ್ನ ಆಪ್ತರ ಜೊತೆ ಮಾತನಾಡುವಷ್ಟು ಚೇತರಿಸಿಕೊಂಡಿದ್ದಾರೆ. ಈ ಬಗ್ಗೆ thenational.ae ವರದಿ ಮಾಡಿದೆ. 

"ನಾನು ಯಾವತ್ತೂ ಭರವಸೆ ಬಿಟ್ಟಿರಲಿಲ್ಲ. ಒಂದು ದಿನ ನನ್ನ ತಾಯಿ ಎದ್ದು ಮಾತನಾಡುತ್ತಾಳೆ ಎಂಬ ಭಾವನೆ ನನ್ನಲ್ಲಿ ಯಾವತ್ತೂ ಇತ್ತು " ಎಂದಿದ್ದಾರೆ ಆಕೆಯ ಪುತ್ರ ಒಮರ್. thenational.ae ಆಕೆಯನ್ನು ಭೇಟಿ ಮಾಡಿದಾಗ ಸ್ವಲ್ಪ ಕಷ್ಟಪಟ್ಟು ಮಾತನಾಡಿ , ಕುರ್ ಆನ್ ಸೂಕ್ತಗಳನ್ನು ಪಠಿಸಿದ್ದಾರೆ. 

ಅಪಘಾತವಾದ ಬಳಿಕ ಮೊದಲು ಲಂಡನ್ ನಲ್ಲಿ ಬಳಿಕ ಹಲವು ವರ್ಷಗಳ ಕಾಲ್ ಅಲ್ ಐನ್ ನ ಆಸ್ಪತ್ರೆಯೊಂದರಲ್ಲಿ ಮುನೀರಾಗೆ ಚಿಕಿತ್ಸೆ ನೀಡಲಾಯಿತು. ಕಳೆದ ವರ್ಷ ಅಬುಧಾಬಿಯ ರಾಜಕುಮಾರ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಆಕೆಗೆ ಜರ್ಮನಿಯಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡಿಸಲು ಬೇಕಾದ ಹಣಕಾಸಿನ ನೆರವು ಘೋಷಿಸಿದರು. 

ಅಲ್ಲಿ ಸತತ ಶಸ್ತ್ರಚಿಕಿತ್ಸೆ ಹಾಗು ಇತರ ಚಿಕಿತ್ಸೆಗಳ ಬಳಿಕ ಚೇತರಿಸಿಕೊಳ್ಳುತ್ತಿದ್ದ ಮುನೀರಾ ತನ್ನ ಅಕ್ಕಪಕ್ಕದಲ್ಲಿದ್ದವರ ಚಲನವಲನಕ್ಕೆ ಸ್ಪಂದಿಸಲು ಪ್ರಾರಂಭಿಸಿದರು. ಒಂದು ದಿನ ಆಸ್ಪತ್ರೆ ಸಿಬ್ಬಂದಿ ಜೊತೆ ಮಗನಿಗೆ ಜಗಳವಾದಾಗ ಇದ್ದಕ್ಕಿದ್ದಂತೆ ಮುನೀರಾ ವಿಚಿತ್ರವಾಗಿ ಶಬ್ದ ಮಾಡತೊಡಗಿದರು. ಅದಾಗಿ ಮೂರು ದಿನಗಳಲ್ಲಿ ಮಗನ ಹೆಸರಿಡಿದು ಕರೆದೇ ಬಿಟ್ಟರು. ಬಳಿಕ ತನ್ನ ಒಂದೊಂದೇ ಸಂಬಂಧಿಕರ ಹೆಸರು ಹೇಳಿ ಕರೆಯತೊಡಗಿದರು. 

ಅದಾದ ಮೇಲೆ ಆಕೆ ಕುರ್ ಆನ್ ಪಠಿಸಲು ಪ್ರಾರಂಭಿಸಿದರು. "ನನ್ನ ಪಾಲಿಗೆ ತಾಯಿಗಾಗಿ 27 ವರ್ಷ ಕಾಯುವುದು ಎಂದೂ ಕಷ್ಟವಾಗಲಿಲ್ಲ. ದಿನ, ವರ್ಷ ಕಳೆದಂತೆ ಆಕೆ ನನ್ನ ಪಾಲಿಗೆ ಹೆಚ್ಚೆಚ್ಚು ಪ್ರೀತಿಪಾತ್ರಳಾಗಿ, ಅಮೂಲ್ಯವಾಗಿ ಕಾಣತೊಡಗಿದರು. ಬಹುಶ ಆಕೆಯ ಆರೈಕೆಯಿಂದಾಗಿ ಅಲ್ಲಾಹನು ನನ್ನನ್ನು ಇತರ ದುರಂತಗಳಿಂದ ರಕ್ಷಿಸಿದ ಎಂದು ನನಗನಿಸುತ್ತದೆ " ಎನ್ನುತ್ತಾರೆ ಓಮರ್ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News