ಲೋಕಸಭಾ ಚುನಾವಣೆ: ರಾಜ್ಯಾದ್ಯಂತ 88.26 ಕೋಟಿ ಮೌಲ್ಯದ ನಗದು, ಮದ್ಯ ವಶ
ಬೆಂಗಳೂರು, ಎ.24: ರಾಜ್ಯದಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯು ಕೊನೆಗೊಂಡಿದ್ದು, ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಸುಮಾರು 88.26 ಕೋಟಿ ನಗದು, ಮದ್ಯ ಹಾಗೂ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಕೋಟ್ಯಂತರ ರೂ.ಗಳು ಹೆಚ್ಚಳವಾಗಿದೆ.
ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ 1.91 ಕೋಟಿ ನಗದು, 21.71 ಕೋಟಿ ಮೌಲ್ಯದ ಮದ್ಯ, 3.17 ಕೋಟಿ ಮೌಲ್ಯದ ಬೆಲೆ ಬಾಳುವ ಆಭರಣಗಳು, 3.96 ಮೌಲ್ಯದ ಮಾದಕ ದ್ರವ್ಯಗಳು ಹಾಗೂ 56.05 ಲಕ್ಷ ಮೌಲ್ಯದ ವಾಹನ, ಸೀರೆ ಸೇರಿದಂತೆ ಮತ್ತಿತರೆ ವಸ್ತುಗಳು ಸೇರಿದಂತೆ 43.39 ಕೋಟಿ ಮೌಲ್ಯದಷ್ಟು ವಸ್ತು ವಶಪಡಿಸಿಕೊಳ್ಳಲಾಗಿದೆ.
ಎರಡನೆ ಹಂತದಲ್ಲಿ 21.49 ಕೋಟಿ ನಗದು, 16.12 ಕೋಟಿ ಮೌಲ್ಯದ ಮದ್ಯ, 6.37 ಕೋಟಿ ಮೌಲ್ಯದ ಬೆಲೆ ಬಾಳುವ ಆಭರಣಗಳು, 8.14 ಲಕ್ಷ ಮೌಲ್ಯದ ಮಾದಕ ದ್ರವ್ಯ ಹಾಗೂ 79.17 ಲಕ್ಷ ಮೌಲ್ಯದ ವಾಹನ ಸೇರಿದಂತೆ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಎರಡೂ ಹಂತದಲ್ಲಿ 39.40 ಕೋಟಿ ನಗದು, 37.84 ಮೌಲ್ಯದ ಮದ್ಯ, 9.54 ಮೌಲ್ಯದ ಬೆಲೆ ಬಾಳುವ ವಸ್ತುಗಳು, 12.10 ಲಕ್ಷ ಮೌಲ್ಯದ ಮಾದಕ ದ್ರವ್ಯ, 1.35 ಕೋಟಿ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ 88.26 ಕೋಟಿ ರೂ.ಗಳಷ್ಟು ಹಣ, ಮದ್ಯ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.
ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿಯು ಅತಿಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ಚುನಾವಣಾ ಅಕ್ರಮದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. 2014 ಲೋಕಸಭಾ ಚುನಾವಣೆ ವೇಳೆ 28.02 ಕೋಟಿ ನಗದು, 2.82 ಕೋಟಿ ಮೌಲ್ಯದ ಮದ್ಯ, 6.78 ಕೋಟಿ ಮೌಲ್ಯದ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಅದರ ಮೂರರಷ್ಟು ಅಧಿಕವಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರಿಗೆ ಆಮಿಷವೊಡ್ಡುತ್ತಿದ್ದವರನ್ನು ಪತ್ತೆ ಹಚ್ಚಲು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1512 ಫ್ಲೈಯಿಂಗ್ ಸ್ಕ್ವಾಡ್‌ಗಳು, 1837 ಸ್ಪಾಟಿಕ್ ಸರ್ವೆಲೆನ್ಸ್ ಸ್ಕ್ವಾಡ್‌ಗಳು, 320 ಅಬಕಾರಿ ತಂಡಗಳು ಹಾಗೂ 180 ವಾಣಿಜ್ಯ ತೆರಿಗೆ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿವೆ. ಇದುವರೆಗೂ ವಶಪಡಿಸಿಕೊಂಡಿರುವ ವಸ್ತುಗಳ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಚುನಾವಣಾ ಅಕ್ರಮ ತಡೆಗಟ್ಟಲು ಆಯೋಗ ಹಲವಾರು ರೀತಿಯ ಕ್ರಮಗಳನ್ನು ಕೈಗೊಂಡಿತ್ತು. ಅದರ ಭಾಗವಾಗಿ ಆಯೋಗದಿಂದ ಬಿಡುಗಡೆ ಮಾಡಿದ್ದ ಸಿವಿಜಿಲ್ ಆ್ಯಪ್ ಮೂಲಕ 3,167 ದೂರುಗಳು ದಾಖಲಾಗಿದ್ದು, 3,165 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಪತ್ರ, ಇಮೇಲ್ ಮೂಲಕ 893 ದೂರುಗಳು ದಾಖಲಾಗಿದ್ದು, 877 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಎನ್‌ಜಿಆರ್‌ಎಸ್ ಮೂಲಕ 12,484 ದೂರುಗಳು ಬಂದಿದ್ದು, 10,134 ದೂರುಗಳನ್ನು ಇತ್ಯರ್ಥ ಮಾಡಲಾಗಿದೆ. ಪತ್ರಿಕೆಗಳು, ಟಿವಿ ಮಾಧ್ಯಮಗಳಿಂದ 450 ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ 517 ದೂರುಗಳು ಬಂದಿದ್ದು, ಎಲ್ಲವನ್ನೂ ಇತ್ಯರ್ಥ ಮಾಡಲಾಗಿದೆ.