ಲೋಕ ಸಮರ ಮುಕ್ತಾಯ: ಎಲ್ಲರ ಚಿತ್ತ ಮೇ 23 ರ ಫಲಿತಾಂಶದತ್ತ

Update: 2019-04-24 13:19 GMT

ಬೆಂಗಳೂರು, ಎ.24: ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಸಮರ ಮುಕ್ತಾಯಗೊಂಡಿದ್ದು, ಇದೀಗ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳು ಫಲಿತಾಂಶದತ್ತ ಮುಖಮಾಡಿದ್ದು, ಫಲಿತಾಂಶಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಎ.18 ಹಾಗೂ ಉತ್ತರ ಕರ್ನಾಟಕದಲ್ಲಿ ಎ.23 ರಂತೆ ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು, ಮೊದಲ ಹಂತದಲ್ಲಿ ಶೇ.68.80 ಹಾಗೂ ಎರಡನೆ ಹಂತದಲ್ಲಿ ಶೇ.68.43 ರಷ್ಟು ಮತದಾನವಾಗಿದೆ. ಇದೀಗ ಎಲ್ಲ 28 ಕ್ಷೇತ್ರಗಳ ವ್ಯಾಪ್ತಿಯಲ್ಲಿನ 478 ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಸೇರಿದ್ದು, ಎಲ್ಲವೂ ಆಯಾ ಕ್ಷೇತ್ರಗಳಲ್ಲಿನ ಸ್ಟ್ರಾಂಗ್ ರೂಂಗಳಲ್ಲಿ ಭದ್ರವಾಗಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ಸಿಸಿಟಿವಿ ಹಾಗೂ ಭದ್ರತೆ: ಭದ್ರತಾ ಕೊಠಡಿಗಳ ಸುತ್ತಮುತ್ತಲೂ ಯಾರೂ ಸಂಚಾರ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ. ದಿನದ 24 ಗಂಟೆಗಳ ಕಾಲವೂ ಪೊಲೀಸರ ಗಸ್ತು ವ್ಯವಸ್ಥೆ ಮಾಡಲಾಗಿದೆ. ಸ್ಟ್ರಾಂಗ್ ರೂಂಗಳ ಒಳಗೆ ಮತ್ತು ಹೊರಭಾಗಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದು, ಕ್ಷಣಕ್ಷಣಕ್ಕೂ ಅದನ್ನು ಪರಿಶೀಲನೆ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯ, ಹಾಸನ, ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಎರಡನೆ ಹಂತದಲ್ಲಿ ಗಮನ ಸೆಳೆದಿರುವ ಕಲಬುರಗಿ, ಶಿವಮೊಗ್ಗ ಸೇರಿದಂತೆ 28 ಕ್ಷೇತ್ರಗಳ ಫಲಿತಾಂಶದ ಕಡೆಗೆ ಅಭ್ಯರ್ಥಿಗಳು ಹಾಗೂ ಪಕ್ಷಗಳ ಕಾರ್ಯಕರ್ತರು ಕುತೂಹಲದಿಂದ ಕಾಯುತ್ತಿದ್ದಾರೆ. 

ಲೋಕಸಭಾ ಚುನಾವಣೆಯ ಫಲಿತಾಂಶ ಮೈತ್ರಿ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಬಿಜೆಪಿ ಫಲಿತಾಂಶದ ಬಳಿಕ ರಾಜ್ಯದಲ್ಲಿ ಸರಕಾರ ರಚನೆ ಮಾಡುವ ಕನಸು ಕಾಣುತ್ತಿದೆ. ಈ ನಿಟ್ಟಿನಲ್ಲಿ ಫಲಿತಾಂಶ ಯಾರ ಪರವಿರುತ್ತದೆ ಎಂಬುದರ ಕುರಿತು ತೀವ್ರ ಕುತೂಹಲ ಮೂಡಿಸಿದ್ದು, ಇದರಿಂದ ಯಾರಿಗೆ ಲಾಭವಾಗಲಿದೆ ಎಂಬುದು ಮೇ 23 ರಂದೇ ತಿಳಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News