ಬಂಡಾಯಕ್ಕೆ ಪ್ರಚೋದನೆ ನೀಡಿದ್ದೇ ಸತೀಶ್: ರಮೇಶ್ ಜಾರಕಿಹೊಳಿ

Update: 2019-04-24 15:13 GMT

ಬೆಂಗಳೂರು, ಎ.24: ಸಚಿವ ಸತೀಶ್ ಜಾರಕಿಹೊಳಿಯ ಗೋಮುಖ ನೋಡಿ ಮೋಸ ಹೋದೆ. ನನ್ನ ಮನೆಗೆ ಬಂದು ಕಣ್ಣೀರು ಹಾಕಿ ಮೋಸ ಮಾಡಿದರು. ನನಗೆ ಬಂಡಾಯಕ್ಕೆ ಪ್ರಚೋದನೆ ನೀಡಿದ್ದೇ ಸತೀಶ್ ಎಂದು ತಮ್ಮ ಸಹೋದರನ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಬುಧವಾರ ನಗರದಲ್ಲಿ ಸೆವೆನ್ ಮಿನಿಸ್ಟರ್ ಕ್ವಾಟ್ರರ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೆ. ಆದರೆ, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಸತೀಶ್ ನನಗೆ ಪ್ರಚೋದನೆ ನೀಡಿದರು. ಇವೆಲ್ಲ ಭಿನ್ನಮತಕ್ಕೆ ಅವರೇ ಕಾರಣ ಎಂದು ಆರೋಪಿಸಿದರು. ಹತಾಶ ಭಾವದಿಂದ ಸತೀಶ್ ಜಾರಕಿಹೊಳಿ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಅವರು ಸೋಲು ಒಪ್ಪಿಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಮಾತ್ರ ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರವನ್ನು ಲಖನ್‌ಗೆ ಬಿಟ್ಟುಕೊಟ್ಟು, ನಾನು ಯಮಕನಮರಡಿ ಕ್ಷೇತ್ರ(ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರ)ದಿಂದ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.

ಒಬ್ಬನೇ ರಾಜೀನಾಮೆ ಕೊಟ್ಟರೆ ಉಪಯೋಗವಿಲ್ಲ. ನನ್ನ ಬೆಂಬಲಿಗರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೇನೆ. ಹಲವು ಮಂದಿ ಸೇರಿ ರಾಜೀನಾಮೆ ಕೊಡುತ್ತೇವೆ. ಇನ್ನೂ ಕೆಲವು ಶಾಸಕರ ಜೊತೆ ಚರ್ಚೆ ಮಾಡಬೇಕಿದೆ. ಅವರ ಜೊತೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಮಾಡುತ್ತೇನೆ. ಇನ್ನೆರಡು ದಿನಗಳಲ್ಲಿ ಸಿಹಿ ಸುದ್ದಿ ನೀಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಭಿನ್ನಮತ ಶಮನಗೊಳಿಸಲು ಸಂಧಾನಕ್ಕೆ ನಾನು ಸಿದ್ಧ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಲೀಡರೇ ಅಲ್ಲ. ನಮ್ಮ ರೇಂಜ್ ಏನಿದ್ರೂ ರಾಹುಲ್ ಗಾಂಧಿ. ಅವರ ಜೊತೆ ಬೇಕಾದರೆ ಚರ್ಚೆ ಮಾಡುತ್ತೇನೆ ಎಂದರು.

ಸತೀಶ್‌ಗೆ ಒಳ್ಳೆಯದಾಗಲಿ: ಸಚಿವ ಸ್ಥಾನ ಸಿಗದಿದ್ದಾಗ ಅಮೂಲ್ಯ ವಸ್ತು ಕಳೆದುಕೊಂಡಂತೆ ವರ್ತಿಸಿದ್ದು ಸತೀಶ್ ಜಾರಕಿಹೊಳಿ. ಸಚಿವ ಸ್ಥಾನ ಕೈ ತಪ್ಪಿದಾಗ ಆತ ಎಷ್ಟು ಬಾರಿ ನನ್ನ ಮನೆಗೆ ಬಂದಿದ್ದಾನೆ ಅನ್ನೋದು ಗೊತ್ತಿದೆ. ಆತನಿಗೆ ದೇವರು ಒಳ್ಳೆಯದು ಮಾಡಲಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಸತೀಶ್ ಜಾರಕಿಹೊಳಿ ಹೇಳಿದ ‘ಆ ವಸ್ತು’ ಎಂದರೆ ಸಚಿವ ಸ್ಥಾನ ಇರಬಹುದೇನೋ? ನಾನು ಸ್ವತಃ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಸಚಿವ ಸ್ಥಾನ ಬೇಕು ಎಂದರೆ ಹೊಸದಿಲ್ಲಿಗೆ ಹೋಗಿ ತೆಗೆದುಕೊಂಡು ಬರುತ್ತೇನೆ. ನಾನು ಯಾವುದೇ ಲಾಬಿ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಿಡಿ: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನನ್ನ ಬಗ್ಗೆ ಮಾತನಾಡುವುದು ಬಹಳಷ್ಟಿದೆ ಎಂದು ಹೇಳಿಕೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ನಾನು ಮಾತನಾಡುವುದು ಬಹಳಷ್ಟಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News