ರಮೇಶ್ ‘ಡ್ರಾಮಾ ಮಾಸ್ಟರ್’: ಸತೀಶ್ ಜಾರಕಿಹೊಳಿ

Update: 2019-04-24 15:17 GMT

ಬೆಳಗಾವಿ, ಎ.24: ಮಾಜಿ ಸಚಿವ ರಮೇಶ್ ಜಾರಕಿಹೊಳಿ ‘ಡ್ರಾಮಾ ಮಾಸ್ಟರ್’ ಇದ್ದಂತೆ, ನಾನು ಆತನ ರೀತಿಯಲ್ಲಿ ಅಳುವುದಿಲ್ಲ. ನನ್ನ ಬಗ್ಗೆ ಅವರು ನೀಡುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಒಬ್ಬ ಸುಳ್ಳುಗಾರ, ಬದ್ಧತೆ ಇಲ್ಲದ ಶಾಸಕ. ಒಂದೊಂದು ದಿನ, ಒಂದೊಂದು ಹೇಳಿಕೆಗಳನ್ನು ನೀಡುತ್ತಾರೆ. ಅವರು ಯಾವುದೋ ಒಂದು ‘ವಸ್ತು’ ಕಳೆದುಕೊಂಡಿದ್ದಾರೆ. ಅದಕ್ಕಾಗಿಯೇ, ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಬಿಜೆಪಿಗೆ ಬೆಂಬಲ ನೀಡುವುದು ಸರಿಯಲ್ಲ. ಮೊದಲು ರಮೇಶ್ ಜಾರಕಿಹೊಳಿ ಯಾವುದಾದರೂ ಒಂದು ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲಿ. ಅವರು ಕಾಂಗ್ರೆಸ್ ಪಕ್ಷದಲ್ಲೆ ಇರಲಿ ಎಂಬುದು ನಮ್ಮ ಬಯಕೆ. ಅವರ ರಾಜೀನಾಮೆಯಿಂದ ಸರಕಾರದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಭಿನ್ನಮತ ಶಮನ ಸಭೆ ನಡೆಸಲಾಗಿತ್ತು. ಜಿಲ್ಲೆಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿರುವ ವಿಚಾರದ ಕುರಿತು ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ್ದು ನಿಜ ಎಂದು ಅವರು ತಿಳಿಸಿದರು.

ಯಮಕನಮರಡಿಯಲ್ಲಿ ಸ್ಪರ್ಧಿಸಲಿ: ಮುಂದಿನ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿರುವ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿರುವ ಸತೀಶ್ ಜಾರಕಿಹೊಳಿ, ಚುನಾವಣೆಗೆ ಇನ್ನು ನಾಲ್ಕು ವರ್ಷ ಕಾಲಾವಕಾಶ ಇದೆ. ಚುನಾವಣೆ ಬಂದಾಗ ನೋಡೋಣ. ಯಮಕನಮರಡಿಯಲ್ಲಿ ರಮೇಶ್ ಆದರೂ ನಿಲ್ಲಲಿ ಅಥವಾ ಅವರ ಅಳಿಯನಾದರೂ ಬಂದು ನಿಲ್ಲಲಿ ಎಂದು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News