ತುಮಕೂರಿಗೆ ಆಗಮಿಸಿದ ರಮೇಶ್ ಮೃತದೇಹ: ಮುಗಿಲು ಮುಟ್ಟಿದ ಕುಟುಂಬದ ರೋಧನ

Update: 2019-04-24 15:53 GMT

ತುಮಕೂರು.ಎ.24: ಶ್ರೀಲಂಕಾದಲ್ಲಿ ರವಿವಾರ ನಡೆದಿದ್ದ ಬಾಂಬ್‍ ಸ್ಫೋಟದಲ್ಲಿ ಮೃತಪಟ್ಟಿದ್ದ ತುಮಕೂರಿನ ಸ್ವರಸ್ಪತಿಪುರಂನ ಉದ್ಯಮಿ ರಮೇಶ್.ಎಲ್‍ ರವರ ಮೃತದೇಹವು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಿದ್ದು, ಬಳಿಕ ನೆಲಮಂಗಲ ಮಾರ್ಗವಾಗಿ ತುಮಕೂರಿಗೆ ಸುಮಾರು 5-30 ಗಂಟೆಗೆ ತಲುಪಿತು. 

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಜಿಲ್ಲಾಡಳಿತ ವತಿಯಿಂದ ತಹಶೀಲ್ದಾರ್ ನಾಗರಾಜ್, ಶಿರಸ್ತೆದಾರ ಜಯಪ್ರಕಾಶ್, ಡಾ.ಎಸ್.ಶರತ್‍ಚಂದ್ರ ಅವರು ತೆರಳಿ ಮೃತದೇಹವನ್ನು ತಂದು ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ತುಮಕೂರು ನಗರದ ಸರಸ್ವತಿ ಪುರಂನಲ್ಲಿರುವ ರಮೇಶ್ ಅವರ ನಿವಾಸದಲ್ಲಿ ಮೃತದೇಹವನ್ನು ಕೆಲ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ೀ ವೇಳೆ ತಾಯಿ ರತ್ನಮ್ಮ, ಪತ್ನಿ ಮಂಜುಳಾ, ಮಗಳು ದೀಕ್ಷ, ಮಗ ಶೋಭಿತ್, ಸಹೋದರ ಪ್ರಕಾಶ್ ಸೇರಿದಂತೆ ಅವರ ಕುಟುಂಬದವರು, ಸ್ನೇಹಿತರ ರೋಧನೆ ಮುಗಿಲು ಮುಟ್ಟಿತ್ತು. ಅಲ್ಲಿಂದ ಕುಣಿಗಲ್‍ನ ಅವರ ನಿವಾಸದಲ್ಲಿ ಸ್ವಲ್ಪ ಸಮಯ ಸಾರ್ವಜನಿಕರ ದರ್ಶನಕ್ಕಿಟ್ಟು ಅಲ್ಲಿಂದ ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿಯ ಅವರ ಸ್ವಗ್ರಾಮವಾದ ಬೆಟ್ಟದ ಕೋಟೆಯಲ್ಲಿ ಅಂತ್ಯಕ್ರಿಯೆ ನೆರವೇರಿತು.  

ತುಮಕೂರಿನ ಸರಸ್ವತಿಪುರಂ ಅವರ ನಿವಾಸದ ಬಳಿ ಮೃತದೇಹ ಆಗಮಿಸಿದಾಗ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಎಸ್‍ಪಿ ಡಾ.ವಂಶಿಕೃಷ್ಣ, ಶಾಸಕ ಜ್ಯೋತಿ ಗಣೇಶ್, ಸೇರಿದಂತೆ ಅಪರ ಬಂಧುಮಿತ್ರರು, ಸಾರ್ವಜನಿಕರು ಅವರ ಅಂತಿಮ ದರ್ಶನ ಪಡೆದರು. 

ಸಚಿವ ಎಸ್.ಆರ್ ಶ್ರೀನಿವಾಸ್, ಮಾಜಿ ಶಾಸಕ ಡಾ.ರಫೀಕ್ ಅಹಮದ್, ಮುರುಳೀಧರ ಹಾಲಪ್ಪ, ಗೋವಿಂದರಾಜು ಮತ್ತಿತರು ಮೃತ ರಮೇಶ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News