ಚಾಮರಾಜನಗರ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಹತ್ಯೆ ಆರೋಪಿ ಕಾರಾಗೃಹದಿಂದ ಪರಾರಿ

Update: 2019-04-24 16:00 GMT

ಚಾಮರಾಜನಗರ,ಎ.24: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಡೆದ ಹತ್ಯಾಕಾಂಡದ ಪ್ರಮುಖ ಆರೋಪಿ, ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡಿನ ಸೇಲಂ ಜಿಲ್ಲೆಯ ಮುರುಗೇಶನ್ ಬೆಳಗಾವಿಯ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದಾನೆ.

ಮುರುಗೇಶ್ ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲೆಯ ಕೊಳ್ಳೇಗಾಲದ ಹರಳೆ ಗ್ರಾಮದ ತೋಟದ ಮನೆಯಲ್ಲಿ ಮಹಿಳೆಯರು ಸೇರಿದಂತೆ ಹಲವಾರು ಮಂದಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದ ಎನ್ನಲಾಗಿದೆ. ಬಳಿಕ ಈತನನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸಿ, ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆಯನ್ನು ನಡೆಸಿದ ಜಿಲ್ಲಾ ನ್ಯಾಯಾದೀಶರು, ಆರೋಪಿ ಮುರುಗೇಶ್‍ನಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದ್ದರು.

ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮುರುಗೇಶ್‍ನನ್ನು ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು, ಆದರೆ ಎ.22 ರಂದು ಕಾರಾಗೃಹದ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಮುರುಗೇಶ್ ಜೈಲಿನ ಭದ್ರಕೋಟೆಯನ್ನು ಭೇದಿಸಿ ಪರಾರಿಯಾಗಿದ್ದಾನೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈತನನ್ನು ಹಿಡಿದು ಕೊಟ್ಟಲ್ಲಿ ಸೂಕ್ತ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News