ಸಂವಿಧಾನ ಪ್ರತೀ ಗುಡಿಸಲಿಗೂ ತಲುಪಲಿ: ಡಾ.ಸಮತಾ ದೇಶಮಾನೆ

Update: 2019-04-24 16:13 GMT

ಕೋಲಾರ,ಎ.24: ವಿಶ್ವದ ಜ್ಞಾನದ ಪ್ರತೀಕವಾದ ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ನಮ್ಮ ದೇಶದ ಸರ್ಕಾರಗಳು ಅಸ್ಪೃಶ್ಯ ನೆಲೆಯಿಂದಲೇ ಕಂಡಿತೆ ವಿನಃ ಅವರನ್ನು ಒಬ್ಬ ವಿದ್ವಾಂಸರನ್ನಾಗಿ ನೋಡಲಿಲ್ಲ. ಆದರೆ, ವಾಸ್ತವದಲ್ಲಿ ಅಂಬೇಡ್ಕರ್ ವಿಶ್ವಕ್ಕೇ ಜ್ಞಾನದ ಪ್ರತೀಕವಾಗಿದ್ದಾರೆ. ಅವರು ರಚಿಸಿದ ಸಂವಿಧಾನ ಭಾರತದ ದೇಶದ ಪ್ರತಿ ಗುಡಿಲನ್ನು ತಲುಪುವ ಗ್ರಂಥವಾಗಲಿ. ಆ ಮೂಲಕ ಸಾಮಾಜಿಕ ಅಸಮಾನತೆಯ ಕತ್ತಲನ್ನು ತೊರೆಯುವ ಬೆಳಕಾಗಲಿ ಎಂದು ಬೆಂಗಳೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಪ್ರಾಧ್ಯಾಪಕಿ, ಚಿಂತಕಿ ಹಾಗೂ ಸಾಹಿತಿ ಡಾ.ಸಮತಾ ಬಿ.ದೇಶಮಾನೆ ಆಶಯ ವ್ಯಕ್ತಪಡಿಸಿದರು. 

ನಗರದ ಹೊರವಲಯದ ಟಮಕದ ಪ್ರದೇಶದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಡಾ ಬಿ.ಆರ್ ಅಂಬೇಡ್ಕರ್ 128 ವರ್ಷದ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಬಗ್ಗೆ ಮಾತನಾಡುವುದು ಸುಲಭ ಆದರೆ ಅವರ ವಿಚಾರಗಳನ್ನು ಎಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯವಾಗಿದೆ. ಅಂಬೇಡ್ಕರ್ ಬಾಲ್ಯದ ದಿನಗಳಲ್ಲಿ ಹೇಗೆಲ್ಲ ಕಷ್ಟದ ಜೀವನ ಚರಿತ್ರೆಯನ್ನು ನಡೆಸಿದ್ದಾರೆ ಎಂಬುದರ ಬಗ್ಗೆ ತಮ್ಮ ಮಕ್ಕಳಿಗೆ ಓದುವಂತೆ ಮಾಡಬೇಕಾಗಿದೆ ಎಂದರು.

ವಿಶ್ವದಲ್ಲೇ ಭಾರತ ಅಂದ ತಕ್ಷಣವೇ ಅಂಬೇಡ್ಕರ್ ಚಿಂತನೆಗಳು ಅವರ ಶಿಕ್ಷಣ ಹೋರಾಟಗಳು ಕಣ್ಣು ಮುಂದೆ ಬರುತ್ತವೆ. ದೇಶದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಅರಿತು ಸಮಾಜದಲ್ಲಿ ಬದುಕಬೇಕು ಎಂದು ಎಲ್ಲರಿಗೂ ನೀರು ಕೊಡಿಸಿದ್ದು, ಮಹಿಳಾ ಪರ ವಿಮೋಚನೆಗೆಗಾಗಿ ಮನುಸ್ಮೃತಿಯನ್ನು ಸುಟ್ಟಿದ್ದು, 1951ರಲ್ಲಿ ಮಹಿಳೆಯರಿಗೆ ಮೀಸಲಾತಿಗಾಗಿ ಮಂಡಿಸಿದ ಹಿಂದೂ ಕೋಡ್ ಬಿಲ್ ಗೆ ಸಂಸತ್ತಿನಲ್ಲಿ ಹಿನ್ನಡೆಯಾದಾಗ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಅವರಿಗೆ ಮಹಿಳೆಯರ ಪರ ಇದ್ದ ಆಸಕ್ತಿಗೆ ಹಿಡಿದ ಕೈಗನ್ನಡಿ ಎಂದರು.

ಅಂಬೇಡ್ಕರ್ ಮೀಸಲಾತಿಯನ್ನು ತರುವುದರ ಜೊತೆಗೆ ರೈತರ, ಕಾರ್ಮಿಕರ ಮಹಿಳೆಯರ ಪರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಶ್ರಮವಹಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ ಟಿ.ಡಿ ಕೆಂಪರಾಜು, ಯಾವುದೇ ಜಯಂತಿಯನ್ನು ಮಾಡಿದರೂ ವಿಶೇಷವಾದ ಸಂದೇಶಗಳನ್ನು ಯುವಜನತೆಗೆ ತಿಳಿಸಿ ಹೆಚ್ಚಿನ ಸಫಲತೆ ಪಡೆದು ದೇಶದ ಅಭಿವೃದ್ಧಿಗೆ ದಾರಿಯಾಗಬೇಕು. ಶಿಕ್ಷಣ ಸಂಘಟನೆ ಮತ್ತು ಹೋರಾಟ ಒಂದು ಸನ್ನಿವೇಶಕ್ಕೆ ಸೀಮಿತವಾಗೇ ನಿರಂತರವಾಗಿರಬೇಕು ಎಂದರು.

ಬೆಂಗಳೂರು ಉತ್ತರ ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಡಿ ಡೊಮಿನಿಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ನಡೆಸಿದ ಹೋರಾಟಗಳಿಂದ ನಮ್ಮಂತವರು ಉನ್ನತ ಶಿಕ್ಷಣ ಪಡೆಯುವಂತಾಗಿದೆ. ಅಂಬೇಡ್ಕರ್ ಜಯಂತಿಯನ್ನು ವಿಶ್ವ ಜ್ಞಾನದ ದಿನವಾಗಿ ವಿಶ್ವಸಂಸ್ಥೆ ಘೋಷಿಸಿರುವುದು ಸಮಾಜದಲ್ಲಿ ಗೌರವ ಘನತೆ ಹೆಚ್ಚಿಸುತ್ತದೆ ಎಂದರು.

ವೇದಿಕೆಯಲ್ಲಿ ಬೆಂಗಳೂರು ಉತ್ತರ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ ಕೆ. ಜನಾರ್ದನಂ. ವಿತ್ತಾಧಿಕಾರಿ ಪ್ರೊ ಡಿ.ಕುಮುದ ಇದ್ದು ವಿವಿಯ ಕುಲಸಚಿವ ಪ್ರೊ.ಎಂ.ಎಸ್.ರೆಡ್ಡಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News