ರಾಜ್‍ಕುಮಾರ್ ಶಿಸ್ತು ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಲಿ: ಕೋಲಾರ ಡಿಸಿ ಮಂಜುನಾಥ್

Update: 2019-04-24 16:25 GMT

ಕೋಲಾರ,ಎ.24: ಶಿಸ್ತುಬದ್ಧ ಜೀವನವನ್ನು ಸಾಗಿಸಿದ ಡಾ.ರಾಜ್‍ಕುಮಾರ್ ಅವರ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಲಿ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ತಿಳಿಸಿದರು.

ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ರಾಜ್‍ಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಡಾ.ರಾಜ್‍ಕುಮಾರ್ ಅವರು ಯಾವುದೇ ವಿವಾದಗಳಿಗೆ ಅವಕಾಶ ಕೊಡದೆ ಸರಳ ಜೀವನವನ್ನು ಸಾಗಿಸಿದರು. ಅವರಂತೆ ಎಲ್ಲರೂ ಉತ್ತಮ ಬದುಕನ್ನು ಸಾಗಿಸುವಂತಾಗಬೇಕು ಎಂದ ಅವರು, ಕನ್ನಡ ಭಾಷೆಗಾಗಿ ಅವರು ಸಾಕಷ್ಟು ಶ್ರಮಿಸಿದ್ದಾರಲ್ಲದೆ ಕೆಲವು ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಭಾಗವಹಿಸಿದರು ಎಂದು ಹೇಳಿದರು.

ಕನ್ನಡ ಚಿತ್ರರಂಗದಲ್ಲಿ ಮೇರು ನಟರಾಗಿದ್ದ ರಾಜ್‍ ಕುಮಾರ್ ಅವರು, ಪೌರಾಣಿಕ ಹಾಗೂ ಆಧುನಿಕ ಕಥಾವಸ್ತುವಿನ ಸಿನಿಮಾಗಳಲ್ಲಿ ಎಲ್ಲಾ ರೀತಿಯ  ಪಾತ್ರಗಳನ್ನು ನಿಭಾಯಿಸಿದರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿ, ನಟ ಸಾರ್ವಭೌಮ, ರಸಿಕರ ರಾಜ, ಕನ್ನಡದ ಕಣ್ಮಣಿ ಹಾಗೂ ವರನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ಉತ್ತಮ ಗಾಯಕರೂ ಸಹ ಆಗಿದ್ದು ಅವರ ಕಂಠದಿಂದ ಅನೇಕ ಹಾಡುಗಳು ಬಂದಿವೆ. ಹಾಗಾಗಿ ಇವರನ್ನು ಗಾನ ಗಂಧರ್ವ ಎಂದೂ ಕರೆಯುವರು ಎಂದರು.

ಸರ್ಕಾರವು ಡಾ.ರಾಜ್‍ಕುಮಾರ್ ಅವರ ಜನ್ಮದಿನವನ್ನು ರಾಜ್ಯಾಧ್ಯಂತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಚರಣೆ ಮಾಡುತ್ತಿದ್ದು, ಕೋಲಾರ ಜಿಲ್ಲೆಯಲ್ಲಿಯೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಆಚರಣೆ ಮಾಡಲಾಗುತ್ತಿದೆ ಎಂದರು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಪರವಾಗಿ ಕಲಾವಿದ ವಿಷ್ಣು ಅವರು, ಜಿಲ್ಲಾಧಿಕಾರಿಗಳಿಗೆ ಸನ್ಮಾನ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರನ್ನು ವಂದಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಹೆಚ್.ಪುಷ್ಪಲತಾ, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಹಿಮವರ್ಧನ್ ನಾಯ್ಡು ಅಲ್ಲೂರಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವೆಂಕಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಉಪನಿರ್ದೇಶಕ ಸೌಮ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಗೀತಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News