ಈ ಬಾರಿಯೂ ನನ್ನ ಗೆಲುವು ನಿಶ್ಚಿತ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

Update: 2019-04-24 17:00 GMT

ಕಲಬುರಗಿ, ಎ. 24: ಹನ್ನೊಂದು ಬಾರಿ ಗೆದ್ದಿರುವ ನಾನು ಈ ಬಾರಿಯೂ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಗೆಲ್ಲಲಿದ್ದೇನೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕರೂ ಆಗಿರುವ ಕಲಬುರಗಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎಂಬ ಬಗ್ಗೆ ಪಕ್ಷದ ಮುಖಂಡರ ಲೆಕ್ಕಾಚಾರದ ಪ್ರಕಾರ ನನ್ನ ಗೆಲುವು ನಿಶ್ಚಿತ. ಇದೀಗ ನಿಮ್ಮದೇನು ಹೇಳಿ ಎಂದು ಮಾಧ್ಯಮ ಪ್ರತಿನಿಧಿಗಳನ್ನೆ ಕೆಣಕಿದರು. ಜಿಲ್ಲೆಯಲ್ಲಿ ಶೇ.60.88ರಷ್ಟು ಮತದಾನವಾಗಿದೆ. ಮತದಾನದ ಪ್ರಮಾಣ ಇನ್ನೂ ಹೆಚ್ಚಾಗಬೇಕಿತ್ತು. ಸುಶಿಕ್ಷಿತರೇ ಮನೆಯಿಂದ ಹೊರಬಂದು ಮತದಾನ ಮಾಡಿಲ್ಲ. ಆ ಬಳಿಕ ಸರಕಾರಗಳ ಬಗ್ಗೆ ಟೀಕೆ ಮಾಡುವವರು ಇವರೇ. ಗೆಲುವು-ಸೋಲಿಗಿಂತ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಹೇಳಿದರು.

ಮತದಾರರು ಯಾರಿಗಾದರೂ ಮತ ಹಾಕಲಿ. ಆದರೆ ಅವರ ಭಾಗವಹಿಸುವಿಕೆ ಮುಖ್ಯ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚುತ್ತದೆ ಎಂದ ಮಲ್ಲಿಕಾರ್ಜುನ ಖರ್ಗೆ, ಇವಿಎಂ ದೋಷದಿಂದ ಮತದಾನ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬವಾಗಿದೆ. ಮತದಾನ ವಿಳಂಬದ ಕಾರಣಕ್ಕೆ ಮತಗಟ್ಟೆಗೆ ಬಂದ ಸಾರ್ವಜನಿಕರು ನಿರಾಸೆಯಿಂದ ಹಿಂದಿರುಗಿದ್ದಾರೆ. ಈ ಬಗ್ಗೆಯೂ ಕೇಂದ್ರ ಚುನಾವಣಾ ಆಯೋಗ ಪರಿಶೀಲನೆ ನಡೆಸಬೇಕೆಂದು ಸಲಹೆ ಮಾಡಿದ ಅವರು, ಮತದಾನ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಒತ್ತಾಯಕ್ಕೆ ಫೋಟೋ ತೆಗೆಸಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ವೈ.ಪಾಟೀಲ, ಹಿರಿಯ ಮುಖಂಡರಾದ ಕೆ.ಬಿ. ಶಾಣಪ್ಪ, ಮೇಲ್ಮನೆ ಮಾಜಿ ಸಭಾಪತಿ ಡೇವಿಡ್ ಸಿಮಿಯಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News