ಶಿಳ್ಳೇಕ್ಯಾತರ ಹಿಮ್ಮೇಳ ಕಲಾವಿದೆ ಮುನಿಯಮ್ಮ ನಿಧನ: ಅಂತ್ಯಸಂಸ್ಕಾರ ಮಾಡಲು ಸ್ಥಳಕ್ಕೆ ಆಗ್ರಹಿಸಿ ದಸಂಸ ಧರಣಿ

Update: 2019-04-24 17:34 GMT

ಮೈಸೂರು,ಎ.24: ದಲಿತ ಮಹಿಳೆ ಮತ್ತು ಶಿಳ್ಳೇಕ್ಯಾತ ಸಮುದಾಯದ ಹಿಮ್ಮೇಳ ಕಲಾವಿದೆ ಶತಾಯುಷಿ ಮುನಿಯಮ್ಮ ನಿಧನರಾಗಿದ್ದು, ಮೃತರ ಅಂತ್ಯಸಂಸ್ಕಾರಕ್ಕೆ ಸ್ಥಳಕ್ಕೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಶವವನ್ನು ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆಯಿತು.

ಮೈಸೂರಿನ ಏಕಲವ್ಯ ನಗರದ ನಿವಾಸಿ ಕರ್ನಾಟಕ ಯಕ್ಷಗಾನ ಹಾಗೂ ಜಾನಪದ ಆಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಶಿಳ್ಳೇಕ್ಯಾತರ ಹಿಮ್ಮೇಳ ಕಲಾವಿದೆ ಮುನಿಯಮ್ಮ (100) ವಯೋಸಹಜರಾಗಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರು ನಾಟಕ, ರಂಗಗೀತೆ, ಜಾನಪದ ಗೀತೆಗಳಲ್ಲಿ ಬಹಳ ಆಸಕ್ತಿ ಹೊಂದಿದ್ದು, ರಾಜ್ಯದೆಲ್ಲೆಡೆ ತಮ್ಮ ಪ್ರತಿಭೆ ಮೆರೆದಿದ್ದರು. 2007 ರಲ್ಲಿ ಅವರನ್ನು ರಾಜ್ಯ ಸರಕಾರ ಗೌರವಿಸಿತ್ತು. ಅಲ್ಲದೆ 2009 ರಲ್ಲಿ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಆಕಾಡೆಮಿ ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿತ್ತು. ಹಾಗೆಯೇ, ದಸರಾ, ಆಕಾಶವಾಣಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಮತ್ತು ರಂಗಾಯಣ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡಿದ ಹಿರಿಮೆ ಇವರಿಗಿದೆ.

ಹಿರಿಯ ರಂಗ ಕಲಾವಿದೆಗೆ ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದಿರುವುದನ್ನು ಕಂಡು ಬೇಸರಗೊಂಡ ಏಕಲವ್ಯ ನಗರದ ನಿವಾಸಿಗಳು ಮತ್ತು ದಸಂಸ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಏಕಲವ್ಯ ನಗರ ನಿವಾಸಿಗಳ ಸ್ಮಶಾನಕ್ಕೆಂದು 1 ಎಕರೆ 20 ಗುಂಟೆ ಜಮೀನನ್ನು ಸರಕಾರ ಈ ಹಿಂದೆಯೇ ನೀಡಿತ್ತು. ಇದನ್ನು ಪ್ರಭಾವಿ ವ್ಯಕ್ತಿಗಳು ಮತ್ತು ಭೂಗಳ್ಳರು ಒತ್ತುವರಿ ಮಾಡಿಕೊಂಡು ಬರಿ 20 ಗುಂಟೆಯನ್ನಷ್ಟೇ ಬಿಟ್ಟಿದ್ದಾರೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ನೇತೃತ್ವದ ದಸಂಸ ಕಾರ್ಯರ್ತರು ಆರೋಪಿಸಿ ಮೃತದೇಹವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಂದು ಪ್ರತಿಭಟಿಸಲು ಮಂದಾದರು. ವಿಷಯ ತಿಳಿದ ಮೇಟಗಳ್ಳಿ ಪೊಲೀಸರು ದಾರಿ ಮಧ್ಯದ ತಡೆದು ನಿಮ್ಮ ಸಮಸ್ಯೆಯನ್ನು ಕಂದಾಯ ಅಧಿಕಾರಿಗಳು ಪರಿಹರಿಸಲಿದ್ದಾರೆ ದಯವಿಟ್ಟು ಮೃತರ ಅಂತ್ಯಕ್ರಿಯೆಯನ್ನು ನೆರವೇರಿಸುವಂತೆ ಮನವಿ ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ದಸಂಸ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ನಂತರ ಶವವನ್ನು ಪಕ್ಕದಲ್ಲೇ ಇದ್ದ ಸ್ಮಶಾನದ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಬಸವರಾಜು ಮತ್ತು ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಲಾಗುವುದು. ಮತ್ತು ಏಕಲವ್ಯನಗರ ನಿವಾಸಿಗಳಿಗೆ ಪ್ರತ್ಯೇಕವಾಗಿ ಒಂದು ಎಕರೆ ಜಾಗ ನೀಡುವ ಭರವಸೆಯನ್ನು ನೀಡಿದ್ದಾರೆ. ನಂತರ ಮೃತ ಮುನಿಯಮ್ಮ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ದಸಂಸ ಮುಖಂಡರಾದ ಎಡದೊರೆ ಮಹದೇವಯ್ಯ, ಕೆ.ವಿ.ದೇವೇಂದ್ರ, ಮಹದೇವು, ರತ್ನಮ್ಮ, ಮಂಗಳ, ಹರೀಶ್, ಸೋಮಯ್ಯ, ಮಲ್ಲೇಶ್, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕಲಾವಿದೆ, ದಲಿತ ಮಹಿಳೆಗೆ ಮಾಡಿದ ಅವಮಾನ: ಚೋರನಹಳ್ಳಿ ಶಿವಣ್ಣ ಆಕ್ರೋಶ
ಒಬ್ಬ ಹಿರಿಯ ಶಿಳ್ಳೇಕ್ಯಾತ ಹಿಮ್ಮೇಳ ಕಲಾವಿದೆ ಮತ್ತು ದಲಿತ ಮಹಿಳೆ ಮುನಿಯಮ್ಮ ಮೃತಪಟ್ಟಿದ್ದು ಇವರ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದಿರುವುದು ದುರಂತ. ಈ ನಾಡಿನ ಬಡ ದಲಿತ ಕಲಾವಿದೆಗೆ ಮಾಡಿದ ಅವಮಾನ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪತ್ರಕೆಯೊಂದಿಗೆ ಮಾತನಾಡಿದ ಅವರು, ಮುನಿಯಮ್ಮ ಒಬ್ಬ ಹಿರಿಯ ಕಲಾವಿದೆ. ಶಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದ್ದ ಇವರು ಮೈಸೂರು ಆಸ್ಥಾನ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಜಾನಪದ ಗೀತೆಗಳನ್ನು ಹಾಡುವ ಮೂಲಕ ಮನೆಮಾತನಾಗಿದ್ದರು. ಜೊತೆಗೆ ಈಕೆ ದಲಿತ ಮಹಿಳೆ. ಇವರಿಗೆ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಅನೇಕ ಪ್ರಶಸ್ತಿಗಳು ಬಂದಿವೆ. ಅಂತಹ ಒಬ್ಬ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಜಾಗ ಇಲ್ಲದಿರುವುದು ಸರ್ಕಾರಕ್ಕೆ ನಾಚಿಕೆಗೇಡು ಎಂದು ಕಿಡಿಕಾರಿದರು.

ಏಕಲವ್ಯನಗರದಲ್ಲಿ ಬಡ ದಲಿತರೇ ಹೆಚ್ಚು ವಾಸಮಾಡುತ್ತಿದ್ದು, ಅವರು ಸತ್ತರೆ ಅವರ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ ಇರುವ ಜಾಗವನ್ನು ಭೂಗಳ್ಳರು ಅತಿಕ್ರಮಿಸಿಕೊಂಡಿದ್ದಾರೆ. ಬದುಕಿರುವಾಗಲೇ ದಲಿತರನ್ನು ಇನ್ನೂ ಶೋಷಣೆಗೊಳಪಡಿಸಿತ್ತಿರುವ ಸಮಾಜ ಸತ್ತ ಮೇಲೆ ಹೂಳಲು ಜಾಗ ನೀಡುವುದೇ?. ಹಾಗಾಗಿ ದಲಿತರಿಗೆ ಪ್ರತ್ಯೇಕ ಸ್ಮಶಾನ ಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News