ಮಳವಳ್ಳಿ: ಬಾಂಬ್ ಸ್ಫೋಟ, ಮಧು ಪತ್ತಾರ ಹತ್ಯೆ ಖಂಡಿಸಿ ಪ್ರತಿಭಟನೆ

Update: 2019-04-24 17:37 GMT

ಮಂಡ್ಯ, ಎ.24: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಕೃತ್ಯ ಖಂಡಿಸಿ ಹಾಗೂ ರಾಯಚೂರಿನ ವಿದ್ಯಾರ್ಥಿನಿ ಮಧು ಪತ್ತಾರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳಿಗೆ ಉಗ್ರ ಶಿಕ್ಷೆಗೆ ಆಗ್ರಹಿಸಿ ಜನವಾದಿ ಮಹಿಳಾ ಸಂಘಟಣೆ, ಪ್ರಾಂತ ರೈತ ಸಂಘ, ಸಿಐಟಿಯು, ಎಸ್‍ಎಫ್‍ಐ, ಡಿವೈಎಫ್‍ಐ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಸಂಜೆ ಮಳವಳ್ಳಿ ಬಸ್ ನಿಲ್ದಾಣದ ಬಳಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

ಶ್ರೀಲಂಕಾದ ಕೊಲಂಬೋ ನಗರದ ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಮತ್ತು ಕೆಲವು ಪ್ರಮುಖ ಹೊಟೇಲ್‍ಗಳನ್ನು ಗುರಿಯಾಗಿಸಿಕೊಂಡು ಸರಣಿ ಬಾಂಬ್ ಸ್ಫೋಟ ನಡೆದಿದ್ದು, ಕರ್ನಾಟಕದ ಏಳು ಮಂದಿ ಒಳಗೊಂಡಂತೆ 290 ಜನರನ್ನು ಬಲಿ ತೆಗೆದುಕೊಂಡಿದೆ. ಹತ್ಯೆ ನಡೆಸಿರುವ ಉಗ್ರಗಾಮಿಗಳಿಗೆ ಘೋರ ಶಿಕ್ಷೆ ಆಗಬೇಕು. ಜಗತ್ತಿನೆಲ್ಲೆಡೆ ನಡೆಯುವ ಬಯೋತ್ಪಾದನೆಯನ್ನು ತಡೆಗಟ್ಟಿ ವಿಶ್ವದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಆತ್ಯಾಚಾರ, ಕೊಲೆಗಳು ಹೆಚ್ಚಾಗುತ್ತಿದ್ದು ಮಹಿಳೆಯರು ಜೀವಿಸುವುದೆ ಕಷ್ಟವಾಗಿದೆ. ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರರವರ ಮೇಲೆ ನಡೆದ ಆತ್ಯಾಚಾರ ಕೊಲೆ ಪ್ರಕರಣವನ್ನು ಸಿಐಡಿ ನಿಸ್ಪಕ್ಷಪಾತವಾಗಿ ನಡೆಸಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಅವರು ತಾಕೀತು ಮಾಡಿದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ, ಕಾರ್ಯದರ್ಶಿ ಸುನೀತಾ, ಸುಶೀಲ, ಮಂಜುಳ, ಪ್ರಾಂತ ರೈತಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್‍ರಾಜ್, ಲಿಂಗಾರಾಜಮೂರ್ತಿ, ಶಂಕರ್, ಸಿಐಟಿಯು ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಎಚ್.ಕೆ.ತಿಮ್ಮೇಗೌಡ, ಡಿವೈಎಫ್‍ಐನ ಚಂದ್ರ, ಗುರುಸ್ವಾಮಿ, ಎಸ್‍ಎಫ್‍ಐನ ಆಶಾ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News