ಮೈಸೂರು: ವಿದ್ಯಾರ್ಥಿನಿ ಕೊಲೆ, ದಲಿತರ ಮೇಲಿನ ಹಲ್ಲೆ, ಸರಣಿ ಬಾಂಬ್ ಸ್ಫೋಟ ಖಂಡಿಸಿ ಪ್ರತಿಭಟನೆ

Update: 2019-04-24 17:45 GMT

ಮೈಸೂರು,ಎ.24: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಕೊಲೆ ಪ್ರಕರಣ ಖಂಡಿಸಿ, ತಮಿಳುನಾಡಿನ ಪೊನ್ಪರಪಿ ಎಂಬಲ್ಲಿ ದಲಿತರು ವಾಸಿಸುತ್ತಿದ್ದ ಗ್ರಾಮಕ್ಕೆ ನುಗ್ಗಿದ ಮೇಲ್ವರ್ಗದ ಜನರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದನ್ನು ಖಂಡಿಸಿ ಹಾಗೂ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಖಂಡಿಸಿ  ಮಾನಸಗಂಗೋತ್ರಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮಾನಸಗಂಗೋತ್ರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರು, 21ನೇ ಶತಮಾನದಲ್ಲಿಯೂ ಮಾನವ ಲಿಂಗ, ಜಾತಿ, ಧರ್ಮದ ಸಂಕೋಲೆಯಲ್ಲಿ ಬಂಧಿಯಾಗಿ ಕ್ರೂರ, ಮೃಗೀಯ ಕೃತ್ಯಗಳನ್ನು ನಡೆಸುತ್ತಿರುವುದು ಅತ್ಯಂತ ಹೇಯ ಕೃತ್ಯ. ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಂಶಯಾಸ್ಪದ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು. ಕೃತ್ಯದಲ್ಲಿ ಭಾಗಿಯಾದವರಿಗೆ ಅತ್ಯುಗ್ರ ಶಿಕ್ಷೆಯಾಗಬೇಕು. ತಮಿಳುನಾಡಿನಲ್ಲಿ ಪ್ರಾಣಿಗಳಿಗಿಂತ ಹೇಯವಾಗಿ ದಲಿತ ಸಮುದಾಯದ ಕುಟುಂಬಗಳನ್ನು ಕೊಚ್ಚಿ ಕೊಲೆಗೈದಿರುವುದರ ಬಗ್ಗೆ ನ್ಯಾಯ ಸಮ್ಮತ ತನಿಖೆಯಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಬೇಕು. ಜಗತ್ತಿನ ಶಾಂತಿಗೆ ಭಂಗವಾಗಿರುವ ಭಯೋತ್ಪಾದನೆಯನ್ನು ಮಟ್ಟ ಹಾಕಲು ಎಲ್ಲ ರಾಷ್ಟ್ರಗಳು ಪರಸ್ಪರ ಕೈಜೋಡಿಸಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಮರಾಜು, ಪ್ರಕಾಶ್, ಮಂಜು, ವಸಂತಕುಮಾರ್, ಕೈಲಾಶ್ ಮೂರ್ತಿ, ಅಕ್ಷತಾ, ಶಿವಕುಮಾರ್, ನಾಗರಾಜ್, ಗೀತಾ, ಲೋಕೇಶ್, ಸೌಮ್ಯ, ವಿನಯ್, ಸುರೇಂದ್ರನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News