ಬಗರ್‍ಹುಕುಂ ಜಮೀನಿನಲ್ಲಿ ಗಾಂಜಾ ಬೆಳೆದ ರೈತನಿಗೆ 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

Update: 2019-04-24 18:07 GMT

ಶಿವಮೊಗ್ಗ, ಎ. 24: ಬಗರ್‍ಹುಕುಂ ಜಮೀನಿನ ಶುಂಠಿ ಬೆಳೆಯ ನಡುವೆ ಗಾಂಜಾ ಬೆಳೆದಿದ್ದ ರೈತನಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

ಹೊಸನಗರ ತಾಲೂಕು ಕೆರೆಜಡ್ಡು ಅಡ್ಡೇರಿ ಗುಬ್ಬಿಗ ಗ್ರಾಮದ ರೇಣುಕಪ್ಪ ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ 7 ಗಾಂಜಾ ಗಿಡಗಳನ್ನು ಬೆಳೆದಿದ್ದ. ಖಚಿತ ವರ್ತಮಾನದ ಮೇರೆಗೆ ತೀರ್ಥಹಳ್ಳಿ ಅಬಕಾರಿ ಉಪ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಶುಂಠಿ ಬೆಳೆ ನಡುವೆ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ಎನ್‍ಡಿಪಿಎಸ್ ಕಾಯ್ದೆ 1985 ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಅಬಕಾರಿ ಪೊಲೀಸರು ಸಲ್ಲಿಸಿದ್ದರು. 

ನ್ಯಾಯಾಲಯದ ವಿಚಾರಣೆ ವೇಳೆ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ಕಠಿಣ ಕಾರಾಗೃಹ ಶಿಕ್ಷೆಯ ಜೊತೆಗೆ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿಯವರು ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News