ಕುಡಿಯುವ ನೀರಿಗೆ ಹಾಹಾಕಾರ: ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ

Update: 2019-04-24 18:10 GMT

ಶಿವಮೊಗ್ಗ, ಎ. 24: ಕುಡಿಯುವ ನೀರಿನ ಹಾಹಾಕಾರ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ, ನಗರದ ಹೊರವಲಯ ವಿರುಪಿನಕೊಪ್ಪ ಆಶ್ರಯ ಬಡಾವಣೆ ನಿವಾಸಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಪತ್ರ ಅರ್ಪಿಸಿದರು. 

ಕಳೆದ 2011 ರಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ ಎಪಿಎಂಸಿ ಕಾರ್ಮಿಕರಿಗೆ 670 ಆಶ್ರಯ ಮನೆ ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸುಮಾರು 300 ಕ್ಕೂ ಅಧಿಕ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಆದರೆ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪದಲ್ಲಿದೆ. ಕುಡಿಯುವ ನೀರು ಪೂರೈಕೆ ಮಾಡಲಾಗುವ ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಸಮರ್ಪಕ ನೀರು ಸರಬರಾಜಾಗುತ್ತಿಲ್ಲ. ಮಿನಿವಾಟರ್ ಹಾಗೂ ಕೊಳವೆಬಾವಿಯ ನೀರಿನಲ್ಲಿ ಹುಳುಗಳು ಬರುತ್ತಿವೆ. ಕುಡಿಯುವ ನೀರಿಗೆ ಸುಮಾರು 2 ಕಿ.ಮೀ. ದೂರ ನಡೆದು ಹೋಗುವಂತಹ ಸ್ಥಿತಿಯಿದೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಬಡಾವಣೆಯಲ್ಲಿ ಬೀದಿ ದೀಪಗಳ ವ್ಯವಸ್ಥೆಯೂ ಇಲ್ಲವಾಗಿದೆ. ಬಡಾವಣೆಯು ಯಾವ ವಾರ್ಡಿಗೆ ಸೇರುತ್ತದೆ ಎಂಬ ಮಾಹಿತಿಯೇ ನಮಗೆ ಇಲ್ಲವಾಗಿದೆ. ಬಡಾವಣೆಯಲ್ಲಿ ಘನತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. 

ಬಡಾವಣೆಯಲ್ಲಿನ ಸಮಸ್ಯೆಗಳ ಕುರಿತಂತೆ ಈಗಾಗಲೇ ಹಲವು ಬಾರಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಆಡಳಿತದ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇನ್ನಾದರೂ ಜಿಲ್ಲಾಡಳಿತ ಕಾಲಮಿತಿಯಲ್ಲಿ ನಿವಾಸಿಗಳ ಅಹವಾಲು ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಹನುಮಂತಪ್ಪ, ಹುಚ್ಚಪ್ಪ, ಮಂಜಪ್ಪ ಸೇರಿದಂತೆ ನೂರಾರು ನಿವಾಸಿಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News