ಮತಗಟ್ಟೆ ಸಿಬ್ಬಂದಿಗಳಿಗೆ ಊಟ ಬಡಿಸಿದ ಶಿವಮೊಗ್ಗ ತಹಶೀಲ್ದಾರ್ !

Update: 2019-04-24 18:12 GMT

ಶಿವಮೊಗ್ಗ, ಎ. 24: ಮತದಾನ ಪೂರ್ಣಗೊಂಡ ನಂತರ ಮತಗಟ್ಟೆಗಳಿಂದ ಮತಯಂತ್ರಗಳೊಂದಿಗೆ ಡಿ-ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಚುನಾವಣಾ ಸಿಬ್ಬಂದಿಗಳಿಗೆ ಶಿವಮೊಗ್ಗ ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರೇ ಊಟ ಬಡಿಸಿ ಗಮನ ಸೆಳೆದಿದ್ದಾರೆ. 

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ನಗರದ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಡಿ-ಮಸ್ಟರಿಂಗ್ ಕೇಂದ್ರ ತೆರೆಯಲಾಗಿತ್ತು. ಮಂಗಳವಾರ ಸಂಜೆ ಮತದಾನ ಪೂರ್ಣಗೊಂಡ ನಂತರ ಮತಗಟ್ಟೆಗಳಿಗೆ ನಿಯೋಜಿತರಾದ ಅಧಿಕಾರಿ-ಸಿಬ್ಬಂದಿಗಳು ಮತಯಂತ್ರಗಳೊಂದಿಗೆ ಡಿ-ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ, ಮತಯಂತ್ರಗಳನ್ನು ದಾಸ್ತಾನು ಮಾಡಿದರು. 

ಡಿ-ಮಸ್ಟರಿಂಗ್ ಕೇಂದ್ರದ ಬಳಿಯೇ ಮತಗಟ್ಟೆ ಸಿಬ್ಬಂದಿಗಳಿಗೆ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರೇ, ಪ್ರತಿಯೋರ್ವ ಸಿಬ್ಬಂದಿಗೂ ಊಟ ಬಡಿಸಿದ್ದಾರೆ. ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿ, ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ ಸಿಬ್ಬಂದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

'ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.80.28 ರಷ್ಟು ಮತದಾನವಾಗಿದೆ. ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಮತದಾನ ಕಾರ್ಯ ನಡೆಯಿತು. ಇದಕ್ಕೆ ಸಿಬ್ಬಂದಿಗಳ ಶ್ರಮ ಮುಖ್ಯ ಕಾರಣವಾಗಿದೆ. ಈ ಕಾರಣದಿಂದೇ ಕರ್ತವ್ಯ ನಿರ್ವಹಿಸಿ ಹಿಂದಿರುಗಿದ ಸಿಬ್ಬಂದಿಗಳಿಗೆ ತಾವೇ ಊಟ ಬಡಿಸಿದೆ. ಇದರಲ್ಲೇನೂ ವಿಶೇಷವಿಲ್ಲ ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News