ಮೇ ಅಂತ್ಯಕ್ಕೆ ಕರಗಡ ಯೋಜನೆ ಪೂರ್ಣ: ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2019-04-24 18:21 GMT

ಚಿಕ್ಕಮಗಳೂರು, ಎ.24: ಕರಗಡ ಏತ ನೀರಾವರಿ ಯೋಜನೆ ಕಾಮಗಾರಿ ಸ್ಥಳಕ್ಕೆ ನಾನು ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ್ದೆ, ಅಲ್ಲಿ ಗುತ್ತಿಗೆದಾರ ಒಂದು ಹಿಟಾಚಿ ಹಾಗೂ ಕೆಲವೇ ಕೆಲಸಗಾರರನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಇದು ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯಲು ಕಾರಣವಾಗಿದ್ದು, ತನ್ನ ಸೂಚನೆ ಮೇರೆಗೆ ಗುತ್ತಿಗೆದಾದ ನಾಲ್ಕು ಹಿಟಾಚಿ ಯಂತ್ರಗಳ ಮೂಲಕ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಕರಗಡ ಕುಡಿಯುವ ನೀರಿನ ಕಾಮಗಾರಿ ಮೇ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಸ್ಥಳದಲ್ಲಿ ಒಂದೇ ಹಿಟಾಚಿ ಇದ್ದ ಪರಿಣಾಮ ಬಂಡಗಳನ್ನು ತೆಗೆಯುವುದು ವಿಳಂಬವಾಗಿತ್ತು. ತಾನು ಗುತ್ತಿಗೆದಾರನಿಗೆ ಕನಿಷ್ಠ ಆರು ಹಿಟಾಚಿಗಳನ್ನು ಬಳಸಿ ಕಾಲುವೆಯ ಎಂಟು ಕಡೆಗಳಲ್ಲಿರುವ ಬಂಡೆಗಳನ್ನು ತೆಗೆಯಲು ಸೂಚಿಸಿದ್ದೆ. ಆತ ಈಗ ನಾಲ್ಕು ಹಿಟಾಚಿಗಳೊಂದಿಗೆ ಅವುಗಳನ್ನು ತೆಗೆಯುವ ಕೆಲಸ ಮಾಡುತ್ತಿದ್ದು, ಬಂಡೆಗಳ ತೆರವು ಕಾಮಗಾರಿ ಶೀಘ್ರ ಮುಗಿಯಲಿದೆ ಎಂದರು.  

ಈ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಕೆಲ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿ ವೆಚ್ಚ ಮತ್ತು ಸಮಯ ಮೀರಿ ಹೋಗಿದೆ. ಈ ಹಿನ್ನೆಲೆಯಲ್ಲಿ ತಾವು ಸಭೆ ನಡೆಸಿ ಕಾಮಗಾರಿಯನ್ನು ಮುಗಿಸುವ ಬಗ್ಗೆ ಚರ್ಚಿಸಿದಾಗ ಮೇ ತಿಂಗಳ ಒಳಗೆ ಮುಗಿಸುವ ಆಶ್ವಾಸನೆ ದೊರೆತಿದೆ ಎಂದ ಅವರು, ರಾಜ್ಯ ಸರಕಾರ ಬಜೆಟ್‍ನಲ್ಲಿ ಒಮ್ಮೆ ಹಣ ಮೀಸಲಿಟ್ಟರೇ ಅದು ಮಂಜೂರಾಗುತ್ತದೆ ಎಂದರು.

ಜಿಲ್ಲೆಯ ಬಯಲು ತಾಲೂಕುಗಳಲ್ಲಿ ನೀರಿನ ಅಭಾವ ಹಾಗೂ ಕ್ಷಾಮಪೀಡಿತ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಇತ್ತೀಚೆಗೆ ಸಭೆ ನಡೆಸಿದ್ದು, ಒಟ್ಟು 72 ಹಳ್ಳಿಗಳಿಗೆ 88 ಟ್ಯಾಂಕ್‍ಗಳ ಮೂಲಕ ಪ್ರತಿನಿತ್ಯ 256 ಬಾರಿ ನೀರು ನೀಡಲಾಗುತ್ತಿದೆ. ಇದರಲ್ಲಿ ಚಿಕ್ಕಮಗಳೂರು ತಾಲೂಕಿನ 31 ಗ್ರಾಮಗಳಿಗೆ 38 ಟ್ಯಾಂಕರ್ ಗಳ ಮೂಲಕ 121 ಬಾರಿ ಕುಡಿಯುವ ನೀರು ಸರಬರಾಜಾಗುತ್ತಿದೆ. ಕಡೂರು ತಾಲೂಕಿನ 41 ಗ್ರಾಮಗಳಿಗೆ ಕುಡಿಯುವ ನೀರು ನೀಡಲು 50 ಟ್ಯಾಂಕರ್ ಬಳಸಲಾಗುತ್ತಿದ್ದು, ಪ್ರತಿದಿನ 135 ಬಾರಿ ನೀರು ನೀಡಲಾಗುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ ಮೇವಿನ ಅಭಾವವಿಲ್ಲ. ಜುಲೈ ಅಂತ್ಯದವರೆಗೂ ಸಾಕಾಗುವಷ್ಟು ಮೇವು ಸಂಗ್ರಹವಿದೆ. ಬೇರೆ ಜಿಲ್ಲೆಗಳಿಗೆ ಮೇವು ಪೂರೈಸುವಷ್ಟು ಸಂಗ್ರಹವಿದೆ ಎಂದರು. 

ಟ್ಯಾಂಕರ್ ಮಾಲಕರಿಗೆ ಪ್ರತೀ 15 ದಿನಕ್ಕೊಮ್ಮೆ ನೀರು ಸರಬರಾಜಿನ ವೆಚ್ಚವನ್ನು ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರತೀ ಸೋಮವಾರ ತಹಶೀಲ್ದಾರರು ಆಯಾ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಸಂಬಂಧಿಸಿದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸಭೆ ಸೇರಿ ಚರ್ಚಿಸಿ ಆ ಸಭೆಯ ಪೂರ್ಣ ವಿವರವನ್ನು ಸಂಜೆ ವೇಳೆಗೆ ತಮ್ಮ ಕಚೇರಿಗೆ ಕಳುಹಿಸಲು ಸೂಚಿಸಲಾಗಿದೆ. ಪ್ರತೀ ಟ್ಯಾಂಕರ್‍ಗಳಿಗೂ ಜಿಪಿಎಸ್ ಅಳವಡಿಸಲಾಗಿದೆ. ಪ್ರಸ್ತುತ ಐದು ಖಾಸಗಿ ಬೋರ್‍ವೆಲ್‍ಗಳ ಮೂಲಕ ನೀರು ಸಂಗ್ರಹಿಸಿ ಚಿಕ್ಕಮಗಳೂರು ಹಾಗೂ ಕಡೂರು ತಾಲೂಕಿನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. 
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಯೋಚಿಸಲಾಗುತ್ತಿದೆ. ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ನಿಯಂತ್ರಣ, ಪ್ಲಾಸ್ಟಿಕ್ ನಿಯಂತ್ರಣ ಹಾಗೂ ಪ್ರವಾಸಿಗರನ್ನು ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯಲು ಬದಲಿ ವ್ಯವಸ್ಥೆ ಮಾಡುವ ಆಲೋಚನೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಯ ಗಿರಿ ಪ್ರದೇಶ ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ಬಂದು ಹೋಗುವ ಪ್ರವಾಸಿಗರ ಹಾಗೂ ವಾಹನಗಳ ಸಂಖ್ಯೆಯ ಅಧ್ಯಯನ ನಡೆಸಿ ಯಾವ ರೀತಿ ನಿಯಂತ್ರಣ ಕಾರ್ಯ ಕೈಗೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುವುದು. ಪ್ರವಾಸಿಗರು ಬರುವ ವಾಹನಗಳನ್ನು ಒಂದು ಕಡೆ ನಿಲ್ಲಿಸಿ ಸೂಕ್ಷ್ಮ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗದಂತೆ ಜಿಲ್ಲಾಡಳಿತದ ನಿಯಂತ್ರಣದಲ್ಲೇ ವಾಹನ ವ್ಯವಸ್ಥೆ ಮಾಡಲು ಆಲೋಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News